ಸುದ್ದಿ

ಅನುಕಂಪ ಆಧಾರದ ನೇಮಕಾತಿಗೆ ಹೊಸ ಮಾರ್ಗಸೂಚಿ ರೂಪಿಸಿದ ಹೈಕೋರ್ಟ್

Share It

ಬೆಂಗಳೂರು: ಮೃತಪಟ್ಟ ಸರ್ಕಾರಿ ನೌಕರನ ಕುಟುಂಬದ ಅನಕ್ಷರಸ್ಥ ವಿಧವೆಯರು ಅನುಕಂಪದ ಆಧಾರದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದಲ್ಲಿ ಅನುಕಂಪದ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸುವ ಉದ್ದೇಶದಿಂದ ಹೊಸ ಮಾರ್ಗಸೂಚಿಗಳನ್ನು ರಚಿಸಿರುವ ಹೈಕೋರ್ಟ್, ಆವುಗಳನ್ನು ಪಾಲಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ.

ಜೇವರ್ಗಿಯ ತಹಶೀಲ್ದಾರ್ ಕಚೇರಿಯಲ್ಲಿ ಜವಾನ ಹುದ್ದೆಯಲ್ಲಿದ್ದ ಪತಿ ಮೃತಪಟ್ಟ ಬಳಿಕ ಮಗನಿಗೆ ಅನುಕಂಪದ ಉದ್ಯೋಗ ನಿರಾಕರಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್​ ನವಾಜ್​ ಮತ್ತು ನ್ಯಾಯಮೂರ್ತಿ ಕೆ.ಎಸ್‌.ಹೇಮಲೇಖಾ ಅವರಿದ್ದ ನ್ಯಾಯಪೀಠ, ಅನುಕಂಪದ ಆಧಾರದ ಹುದ್ದೆಗಳಿಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಅಲ್ಲದೆ, ಎಂಟು ವಾರಗಳಲ್ಲಿ ಮೃತ ನೌಕರನ ಪುತ್ರ ಮಹಬೂಬ್‌ಗೆ ಅನುಕಂಪದ ಆಧಾರದಮೇಲೆ ಉದ್ಯೋಗ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.

ಹೈಕೋಟ್೯ ರೂಪಿಸಿರುವ ಮಾರ್ಗಸೂಚಿಗಳು:
ಎಲ್ಲ ಅನುಕಂಪದ ನೇಮಕಾತಿ ಅರ್ಜಿಗಳನ್ನು 30 ದಿನಗಳ ಒಳಗೆ ಲಿಖಿತವಾಗಿ ಸ್ವೀಕರಿಸಬೇಕು. ಅರ್ಜಿಗಳನ್ನು ಸಲ್ಲಿಸಲು ಕಾಲಮಿತಿ ನಿಗದಿಪಡಿಸ ಬೇಕು. ಅರ್ಜಿ ಸಲ್ಲಿಕೆಯಾದ ನಂತರದ 90 ದಿನಗಳ ಒಳಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು.
ಅರ್ಜಿ ತಿರಸ್ಕೃತವಾದ ಸಂದರ್ಭದಲ್ಲಿ ಸಮಂಜಸವಾದ ಕಾರಣ ನೀಡಬೇಕು. ಈ ಕುರಿತ ಪ್ರಕ್ರಿಯೆಗೆ ಏಕರೂಪದ ಪ್ರಮಾಣಿತ ಕಾರ್ಯಾಚರಣಾ ವಿಧಾನ(ಎಸ್‌ಒಪಿ) ಜಾರಿಗೆ ತರಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚಿಸಿದೆ.

ಏನಿದು ಪ್ರಕರಣದ?: ಕಲಬುರಗಿಯ ಜೇವರ್ಗಿ ತಹಶೀಲ್ದಾರ್ ಕಚೇರಿಯಲ್ಲಿ ಜವಾನರಾಗಿ ಕೆಲಸ ಮಾಡುತ್ತಿದ್ದ ರಾಜಾಪಟೇಲ್ 2014ರ ಡಿ.16ರಂದು ನಿಧನರಾಗಿದ್ದರು. ಅವರ ನಾಲ್ವರು ಪುತ್ರರಲ್ಲಿ ಒಬ್ಬರಿಗೆ ನೇಮಕಾತಿ ಕೋರಿ ಮೃತನ ಪತ್ನಿ 2015ರ ಜ.2ರಂದು  ಅರ್ಜಿ ಸಲ್ಲಿಸಿದ್ದರು. ಅರ್ಜಿಗೆ ಉತ್ತರಿಸಲು ವಿಳಂಬ ಮಾಡಿದ್ದ ಸರ್ಕಾರ ನಂತರ ವಯಸ್ಸು ಕಡಿಮೆಯಿದೆ ಎಂದು ನೌಕರಿ ನೀಡಲಿಲ್ಲ. ಬಳಿಕ ಮತ್ತೊಬ್ಬ ಮಗ ಮಹಬೂಬ್ 2017ರ ಫೆ.23ರಂದು ಅರ್ಜಿ ಸಲ್ಲಿಸಿದ್ದರು. ನಿಯಮ ಪ್ರಕಾರ ವರ್ಷದೊಳಗೆ ಅರ್ಜಿ ಸಲ್ಲಿಸಬೇಕು. ಆದರೆ, ಈ ಕಾಲಮಿತಿ ಮೀರಿ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದ ಸರ್ಕಾರ ಅರ್ಜಿ ತಿರಸ್ಕರಿಸಿತ್ತು. ಇದರಿಂದ ಮೃತ ನೌಕರನ ಪತ್ನಿ ಕೆಎಟಿ ಮೊರೆ ಹೋಗಿದ್ದರು.


Share It

You cannot copy content of this page