ಬೆಂಗಳೂರು: ಸರ್ಕಾರಿ ಸೇವೆಯಿಂದ ನಿವೃತ್ತಿಯಾಗಿ 15 ವರ್ಷಗಳ ಬಳಿಕೆ ಬಡ್ತಿ ನೀಡಲು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಸೇವೆಯಿಂದ ನಿವೃತ್ತರಾಗಿ 15 ವರ್ಷಗಳ ಬಳಿಕ ಬಡ್ತಿ ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ಆದೇಶ ಪ್ರಶ್ನಿಸಿ, ನಿವೃತ್ತ ಉಪನ್ಯಾಸಕ ಡಾ.ಕೆ.ಸತ್ಯನಾರಾಯಣ ಸಿಂಗ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರ ಪೀಠ ಅರ್ಜಿಯನ್ನು ತಿರಸ್ಕರಿಸಿ ಆದೇಶ ನೀಡಿದೆ.
ಅರ್ಜಿದಾರರ ಡಾ.ಕೆ.ಸತ್ಯನಾರಾಯಣ ಸಿಂಗ್ ಉಪನ್ಯಾಸಕ ವೃತ್ತಿಯಿಂದ 1995ರಲ್ಲಿ ನಿವೃತ್ತರಾಗಿದ್ದಾರೆ. ಬಡ್ತಿಗೆ ಅವಕಾಶವಿದ್ದಾಗ ಪಡೆದು ಕೊಳ್ಳದೆ ನಿವೃತ್ತಿಯ ಬಳಿಕ ಕೋರಿದ್ದಾರೆ. 1986ರಲ್ಲಿ ಬಡ್ತಿ ನಿರಾಕರಿಸಿದ್ದು, ಅದನ್ನು ಮತ್ತೆ ಪಡೆಯಬೇಕು ಎಂಬುದಕ್ಕೆ ಯಾವುದೇ ಪ್ರಯತ್ನ ಮಾಡಿಲ್ಲ. ನಿವೃತ್ತಿಯ 15 ವರ್ಷಗಳ ಬಳಿಕ ಬಡ್ತಿ ಪಡೆಯುವ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.
ಶಿಕ್ಷಣ ಇಲಾಖೆಗೆ 2011ರಲ್ಲಿ ಮನವಿ ಸಲ್ಲಿಸಿ, ಬಳಿಕ 2012ರಲ್ಲಿ ಕೆಎಟಿ ಮೆಟ್ಟಿಲೇರಿದ್ದಾರೆ. ಸೇವೆಯಲ್ಲಿದ್ದಾಗ ಬಡ್ತಿ ಪಡೆಯದೇ ನಿವೃತ್ತಿಯ ಬಳಿಕ ವೇತನ, ಸೌಲಭ್ಯ ಹೆಚ್ಚಳಕ್ಕಾಗಿ ಬಡ್ತಿ ಕೋರಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಮಂಡಳಿ ಆದೇಶದಲ್ಲಿ ತಿಳಿಸಿದ್ದು, ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆ ಕಂಡುಬರುತ್ತಿಲ್ಲ ಎಂದು ತಿಳಿಸಿದ ನ್ಯಾಯಪೀಠ ಅರ್ಜಿ ತಿರಸ್ಕರಿಸಿ ಆದೇಶಿಸಿದೆ.