ಜೈಪುರ: ಸಕಾರಣವಿಲ್ಲದೆ ತರಗತಿಗೆ ಗೈರಾಗಿ ಕೋಚಿಂಗ್ ಕ್ಲಾಸ್‌ಗಳಿಗೆ ತೆರಳುವ, ಶೇ.75% ಹಾಜರಾತಿ ಇಲ್ಲದ 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಬಿಡಬೇಡಿ ರಾಜಸ್ಥಾನ ಹೈಕೋರ್ಟ್ ನಿರ್ದೇಶನ ನೀಡಿದೆ.
ವಿದ್ಯಾರ್ಥಿಗಳಿಗೆ ಶೇ.75 ಹಾಜರಾತಿ ಕಡ್ಡಾಯವಾಗಿದೆ. ಶಾಲೆ ಬಿಟ್ಟು ಕೋಚಿಂಗ್ ಕ್ಲಾಸ್‌ಗಳಿಗೆ ತೆರಳಿದರೂ ಅಂತಹ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಹಾಜರಾತಿ ನೀಡುವ ಪರಿಪಾಠವೂ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ ಶಾಲಾ ಸಮಯದಲ್ಲಿ ವಿದ್ಯಾರ್ಥಿಗಳು ಯಾವುದಾದರೂ ಕ್ಲಾಸ್‌ಗಳಿಗೆ ಹೋಗುತ್ತಿದ್ದಾರೆಯೇ ಎಂಬುದನ್ನು ವಿಶೇಷವಾಗಿ ಪರಿಶೀಲನೆ ನಡೆಸಬೇಕು. ಸೂಕ್ತ ಕಾರಣವಿಲ್ಲದೆ ಗೈರು ಹಾಜರಾಗುವ ವಿದ್ಯಾರ್ಥಿಗಳು ಮಾತ್ರವಲ್ಲದೆ, ಅಂತಹ ನಡವಳಿಕೆಯನ್ನು ಕ್ರಮಬದ್ಧಗೊಳಿಸುವ ಶಾಲೆಗಳು ಹಾಗೂ ಕೋಚಿಂಗ್ ಕ್ಲಾಸ್‌ಗಳನ್ನು ನಡೆಸುವ ಸಂಸ್ಥೆಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಕೇಂದ್ರಿಯ ಮಾಧ್ಯಮಿಕ ಶಿಕ್ಷಣ ಮಂಡಳಿ ಹಾಗೂ ರಾಜಸ್ತಾನ ಪ್ರೌಢ ಶಿಕ್ಷಣ ಮಂಡಳಿಗೆ ನ್ಯಾಯಮೂರ್ತಿಗಳಾದ ದಿನೇಶ್ ಮೆಹ್ರಾ ಹಾಗೂ ಅನೂಪ್ ಕುಮಾರ್ ಅವರ ವಿಭಾಗೀಯ ಪೀಠ ಸೂಚಿಸಿದೆ.
ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳ ಗೈರುಹಾಜರಾತಿ ಹಾಗೂ ಕೋಚಿಂಗ್ ಕ್ಲಾಸ್‌ಗಳ ತಪಾಸಣೆ ನಡೆಸಲು ವಿಶೇಷ ತನಿಖಾ ತಂಡಗಳನ್ನ ರಚಿಸಬೇಕು ಎಂದು ಈ ಎರಡೂ ಶಿಕ್ಷಣ ಮಂಡಳಿಗಳಿಗೆ ಸೂಚಿಸಿದೆ.
ಶೈಕ್ಷಣಿಕ ಅವಧಿಯ ನಡುವೆಯೇ ಶಾಲೆ ಬಿಡುವ ವಿದ್ಯಾರ್ಥಿಗಳಿಗೆ ಮಂಡಳಿಗಳ ಪರೀಕ್ಷೆಗೆ ಹಾಜರಾಗುವುದನ್ನು ತಡೆಯಬಹುದೆಂದು ಹೇಳಿರುವ ನ್ಯಾಯಪೀಠ, ಶಾಲಾ ತರಗತಿಯ ಅವಧಿಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಹಾಜರಾತಿಯೂ ಕಡ್ಡಾಯವಾಗಿದೆ. ಹೀಗಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಹಾಜರಾತಿಯನ್ನು ಖಚಿತಪಡಿಸಬೇಕೆಂದು ನಿರ್ದೇಶನ ನೀಡಿದೆ.