ಬೆಂಗಳೂರು: ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಮಹಿಳೆ ಸಲ್ಲಿಸುವ ಅರ್ಜಿಯ ಸಂಬಂಧ ಪ್ರತಿವಾದಿಗಳಾದ ಪತಿ ಮತ್ತವರ ಕುಟುಂಬ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸದೆ ಪ್ರಕರಣ ವಜಾಗೊಳಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಅರ್ಜಿಯಲ್ಲಿರುವ ಅಂಶಗಳಲ್ಲಿ ಯಾವುದೇ ರೀತಿಯ ಕೌಟುಂಬಿಕ ಹಿಂಸೆ ನೀಡಲಾಗಿಲ್ಲ ಎಂಬುದಾಗಿ ಪರಿಗಣಿಸಿ ವಜಾಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.
ಮಹಿಳೆ ಸಲ್ಲಿಸಿರುವ ಅರ್ಜಿಯಲ್ಲಿರುವ ಅಂಶಗಳನ್ನು ಪರಿಶೀಲಿಸಿದಲ್ಲಿ ಪ್ರತಿವಾದಿಗಳಾದ ಪತಿ ಮತ್ತವರ ಕುಟುಂಬದಿಂದ ಕೌಟುಂಬಿಕ ದೌರ್ಜನ್ಯ ನಡೆಸಿರುವ ಸಂಬಂಧ ಅಂಶಗಳು ಗೊತ್ತಾಗುತ್ತವೆ. ಅರ್ಜಿ ಸಲ್ಲಿಕೆಯಾದ ಬಳಿಕ ಕೌಟುಂಬಿಕ ನ್ಯಾಯಾಲಯ ಕನಿಷ್ಠ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಬೇಕಾಗಿತ್ತು. ಅರ್ಜಿದಾರರ ಕುರಿತು ಪೂರ್ವಾಗ್ರಹ ಪೀಡಿತವಾಗಿರುವ ಕೌಟುಂಬಿಕ ನ್ಯಾಯಾಲಯ ಅರ್ಜಿಯ ಕುರಿತು ಯಾವುದೇ ಸೂಕ್ತ ಆದೇಶಕ್ಕೆ ಮುಂದಾಗದೆ ವಿಚಾರಣೆಯ ಆರಂಭದಲ್ಲಿಯೇ ನಿರಾಸಕ್ತಿ ತೋರಿದೆ ಎಂದು ಕೋರ್ಟ್ ಹೇಳಿತು.
ವಿಚಾರಣಾ ನ್ಯಾಯಾಲಯ ಅರ್ಜಿ ಸಂಬಂಧ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿದ ಬಳಿಕ ಅರ್ಜಿದಾರರ ಕುರಿತಂತೆ ಸತ್ಯಾಂಶಗಳು ಕಂಡುಬರದಿದ್ದಲ್ಲಿ ಅರ್ಜಿಯನ್ನು ವಜಾಗೊಳಿಸುವ ಬದಲಾಗಿ ಸೂಕ್ತ ಆದೇಶವನ್ನು ಹೊರಡಿಸಬಹುದಾಗಿತ್ತು ಎಂದು ಪೀಠ ಅಭಿಪ್ರಾಯಪಟ್ಟಿದೆ.