ಕಲಬುರಗಿ: ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಿದ್ದ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯುವ ಮೂಲಕ ಕಲಬುರಗಿ ಹೈಕೋರ್ಟ್ ದ್ವಿಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ.
ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಗರ್ಭಿಣಿ ತಂಗಿಯನ್ನ ಜೀವಂತ ಸುಟ್ಟುಹಾಕಿದ್ದ ಇಬ್ಬರು ಸಹೋದರರಿಗೆ ಮರಣದಂಡನೆ ಖಾಯಂ ಮಾಡಿದೆ. ಆ ಮೂಲಕ ವಿಜಯಪುರ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ. ಇಬ್ರಾಹಿಂ ಸಾಬ್(31) ಮತ್ತು ಅಕ್ಟರ್(28)ಗೆ ಮರಣ ದಂಡನೆ ಶಿಕ್ಷೆ. ಹಾಗೂ ಬಾನು ಬೇಗಂ ತಾಯಿ ಮತ್ತು ಕುಟುಂಬದ ಐವರು ಸದಸ್ಯರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
2017ರಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗುಂಡಕನಲ್ ಗ್ರಾಮದಲ್ಲಿ ದಲಿತ ಯುವಕ ಸಾಯಿಬಣ್ಣನನ್ನು ಪ್ರೀತಿಸಿ ಬಾನು ಬೇಗಂ ಮದುವೆಯಾಗಿದ್ದಳು. 9 ತಿಂಗಳ ಗರ್ಭಿಣಿ ಆಗಿದ್ದ ಬಾನು ಬೇಗಂ ಅನ್ನು ಆಕೆಯ ಸಹೋದರರು ಬೆಂಕಿ ಹಚ್ಚಿ ಕೊಂದಿದ್ದರು.
ಈ ಪ್ರಕರಣ ಸಂಬಂಧ ಬಸವನ ಬಾಗೇವಾಡಿ ಪೊಲೀಸರು ತನಿಖೆ ನಡೆಸಿ ಚಾರ್ಜ್‌ಶಿಟ್ ಸಲ್ಲಿಸಿದರು. ವಿಚಾರಣೆ ನಡೆಸಿದ ವಿಜಯಪುರ ಜಿಲ್ಲಾ ಕೋರ್ಟ್ ಈ ಇಬ್ಬರು ಸಹೋದರರಿಗೆ ಮರಣದಂಡನ ಶಿಕ್ಷೆ ಹಾಗೂ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪು ಪ್ರಶ್ನಿಸಿ ಕಲಬುರಗಿ ಹೈಕೋರ್ಟ್ ಪೀಠಕ್ಕೆ ಅಪರಾಧಿಗಳು ಮೇಲ್ಮನವಿ ಸಲ್ಲಿಸಿದ್ದರು.
ಇದೀಗ ಕಲಬುರಗಿ ಹೈಕೋರ್ಟ್ ದ್ವಿಸದಸ್ಯ ಪೀಠ ಈ ತೀರ್ಪುನ್ನು ಮಾನ್ಯ ಮಾಡಿದೆ. ಆ ಮೂಲಕ ಇಬ್ಬರು ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ಖಾಯಂಗೊಳಿಸಿ ಕೊಲೆಯಾದ ಬಾನುಬೇಗಂನ ತಾಯಿ ಹಾಗೂ ಕುಟುಂಬದ ಐವರು ಸದಸ್ಯರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.