ಬೆಂಗಳೂರು: ಸರ್ಕಾರಗಳಿಂದ ಹಣಕಾಸು ನೆರವು ಪಡೆದುಕೊಳ್ಳುವ ಸಹಕಾರ ಸಂಘಗಳ ನೌಕರರೂ ಭ್ರಷ್ಟಾಚಾರ ನಿಯಂತ್ರಣಾ ಕಾಯ್ದೆಯ ವ್ಯಾಪ್ತಿಗೆ ಒಳಪಡಬೇಕು ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಅಲ್ಲದೆ, ಹಾಸನ ಜಿಲ್ಲೆ ಹಿರೇಕಡಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಸಿ.ಎ.ಕೀರ್ತಿಕುಮಾರ್ ವಿರುದ್ಧ ದಾಖಲಾಗಿರುವ ಆದಾಯ ಮೀರಿ ಆಸ್ತಿ ಪ್ರಕರಣ ಕುರಿತು ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಅನುಮತಿ ನೀಡುವಂತೆ ಸಹಕಾರ ಸಂಘಕ್ಕೆ ಹೈಕೋರ್ಟ್ ಸೂಚಿಸಿದೆ.
ಭ್ರಷ್ಟಾಚಾರದ ಆರೋಪದಲ್ಲಿ ಸಂಘದ ಕಾರ್ಯದರ್ಶಿ ಸಿ.ಎ.ಕೀರ್ತಿಕುಮಾರ್ ವಿರುದ್ಧ ತನಿಖೆಗೆ ಅನುಮತಿ ನಿರಾಕರಿಸಿ ನಿರ್ಣಯ ಕೈಗೊಂಡಿದ್ದ ಸಹಕಾರ ಸಂಘದ ಕ್ರಮವನ್ನು ಪ್ರಶ್ನಿಸಿ ಲೋಕಾಯುಕ್ತ ಪೊಲೀಸರು ಹೈಕೋಟ್೯ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ನಟರಾಜ್ ಅವರು, ತಾನು ಸರ್ಕಾರಿ ಸಂಸ್ಥೆಯಲ್ಲ ಎಂದು ಹಿರೇಕಡಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಿಳಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹಣಕಾಸಿನ ನೆರವು ಪಡೆಯುವ ಕೃಷಿ, ಕೈಗಾರಿಕೆ, ಬ್ಯಾಂಕಿಂಗ್, ವ್ಯಾಪಾರದಲ್ಲಿ ತೊಡಗಿರುವ ಸಹಕಾರಿ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಅಥವಾ ಪದಾಧಿಕಾರಿಗಳ ವಿರುದ್ದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಅವಕಾಶವಿದೆ. ಈ ಸಂಘ ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಣಕಾಸು ಅನುದಾನ ಪಡೆದಿದೆ. ಹಾಗಾಗಿ ಸಂಘದ ಕಾರ್ಯದರ್ಶಿಯನ್ನು ಸಾರ್ವಜನಿಕ ಸೇವಕ ಅಲ್ಲ ಎಂಬುದಾಗಿ ಹೇಳಲಾಗದು ಎಂದು ಸ್ಪಷ್ಟಪಡಿಸಿದೆ.
ಹಾಗೆಯೇ, ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಸಂಘದ ಕಾರ್ಯದರ್ಶಿ ಕೀರ್ತಿಕುಮಾರ್‌ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಂದಿನ ಒಂದು ತಿಂಗಳಲ್ಲಿ ಪ್ರಕರಣದ ತನಿಖೆಗೆ ಅನುಮತಿ ನೀಡುವ ಸಂಬಂಧ ನಿರ್ಣಯ ಕೈಗೊಳ್ಳಬೇಕು ಎಂದು ಪೀಠ ತನ್ನ ಆದೇಶಿಸಿದೆ.