ಹೊಸದಿಲ್ಲಿ: ಜನದಟ್ಟಣೆಯ ನಗರಗಳಲ್ಲಿ ಇತ್ತೀಚೆಗೆ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಬೀದಿ ನಾಯಿಗಳ ಹಾವಳಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಬೀದಿ ನಾಯಿಗಳು ಕಚ್ಚಿದರೆ ಆ ಶ್ವಾನಗಳಿಗೆ ಆಹಾರ ಹಾಕುವವರನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಎಚ್ಚರಿಸಿದೆ.
ಅಲ್ಲದೆ, ನಾಯಿ ಕಡಿತಕ್ಕೆ ಒಳಗಾದ ವ್ಯಕ್ತಿಗಳ ವೈದ್ಯಕೀಯ ವೆಚ್ಚವನ್ನೂ ಬೀದಿ ನಾಯಿಗಳಿಗೆ ಆಹಾರ ಒದಗಿಸುವವರು ಭರಿಸಬೇಕು. ಜತೆಗೆ ನಾಯಿಗಳಿಗೆ ಲಸಿಕೆ ಹಾಕಿಸುವ ಜವಾಬ್ದಾರಿಯನ್ನೂ ಅವರೇ ಹೊರಬೇಕು. ನಾಯಿಗಳನ್ನು ಪ್ರೀತಿಸಿದರೆ ಸಾಲದು, ಅವುಗಳ ಕಾಳಜಿಯನ್ನೂ ಮಾಡ ಬೇಕು. ಬೀದಿ ನಾಯಿಗಳು ಅಮಾಯಕರಿಗೆ ಹಾನಿ ಮಾಡುವುದನ್ನು ಸಹಿಸಲಾಗದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕೇರಳದಲ್ಲಿ ಹೆಚ್ಚಿರುವ ಬೀದಿನಾಯಿಗಳ ಹಾವಳಿ ಕುರಿತು ಸಲ್ಲಿಸಲಾದ ಅರ್ಜಿಗಳ ಬಗ್ಗೆ ವಿಚಾರಣೆ ವೇಳೆ ಜನರ ಸುರಕ್ಷತೆ ಮತ್ತು ಪ್ರಾಣಿಗಳ ಹಕ್ಕುಗಳ ಬಗ್ಗೆ ಸಮತೋಲನ ಕಾಯ್ದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಜೆ.ಕೆ. ಮಹೇಶ್ವರಿ ಅವರನ್ನೊಳಗೊಂಡ ಪೀಠ ಒತ್ತಿ ಹೇಳಿದೆ.