ಸುದ್ದಿ

ಕನ್ಹೇರಿ ಮಠದ ಸ್ವಾಮೀಜಿಗೆ ವಿಜಯಪುರ ಜಿಲ್ಲೆಗೆ ಪ್ರವೇಶ ನಿರ್ಬಂಧ ಆದೇಶ ಎತ್ತಿಹಿಡಿದ ಹೈಕೋರ್ಟ್

Share It

ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್; ಸ್ವಾಮೀಜಿ ಕಾನೂನು ಹೋರಾಟಕ್ಕೆ ತೀವ್ರ ಹಿನ್ನಡೆ

ಬೆಂಗಳೂರು: ಲಿಂಗಾಯತ ಮಠಾಧಿಪತಿಗಳ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇರೆಗೆ ಮೂರು ತಿಂಗಳು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ವಿಜಯಪುರ ಜಿಲ್ಲೆಗೆ ಪ್ರವೇಶ ನಿರ್ಬಧಿಸಿ ಜಿಲ್ಲಾಡಳಿತ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ವಿಜಯಪುರ ಜಿಲ್ಲಾಧಿಕಾರಿಯು ಅಕ್ಟೋಬರ್ 16ರಿಂದ ಡಿಸೆಂಬರ್ 14ರವರೆಗೆ ಜಿಲ್ಲೆಗೆ ಕಾಡಸಿದ್ದೇಶ್ವರ ಸ್ವಾಮೀಜಿ ಪ್ರವೇಶ ನಿರ್ಬಂಧಿಸಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕನ್ಹೇರಿ ಸ್ವಾಮೀಜಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಪೀಠದಲ್ಲಿ ಆಲಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಶುಕ್ರವಾರ ತೀರ್ಪು ಪ್ರಕಟಿಸಿದೆ. ಸ್ವಾಮೀಜಿ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯ, ಜಿಲ್ಲಾಡಳಿತದ ಕ್ರಮವನ್ನು ಎತ್ತಿಹಿಡಿದಿದೆ.

ವಿಚಾರಣೆ ವೇಳೆ ನ್ಯಾಯಪೀಠ, “ಕಾಡಸಿದ್ದೇಶ್ವರ ಸ್ವಾಮೀಜಿ ಬಳಸಿರುವ ನುಡಿಗಳು ಅವರ ಸ್ಥಾನಕ್ಕೆ ಶೋಭೆ ತರುವಂತಹುದಲ್ಲ. ಸ್ವಾಮೀಜಿ ಸಾಮಾನ್ಯರಿಗಿಂತಲೂ ಕೆಳ ಹಂತದ ಭಾಷೆ ಬಳಕೆ ಮಾಡಿದ್ದಾರೆ,” ಎಂದು ಕೋಟ್೯ ಬೇಸರ ವ್ಯಕ್ತಪಡಿಸಿದೆ.

ಸರಕಾರದ ನಿರ್ಬಂಧ ಕ್ರಮ ಸಮರ್ಥಿಸಿಕೊಂಡ ಅಡ್ವಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ”ಸ್ವಾಮೀಜಿಯ ಹಿತದೃಷ್ಟಿಯಿಂದಲೇ ಅವರ ವಿಜಯಪುರ ಭೇಟಿ ನಿರ್ಬಂಧಿಸಲಾಗಿದೆ. ಕನ್ಹೇರಿ ಸ್ವಾಮೀಜಿಗಳ ಭಕ್ತರೇ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವುದು ಬೇಡವೆಂದು ಹೇಳುತ್ತಿದ್ದಾರೆ. ಸ್ವಾಮೀಜಿ ಬಸವನಬಾಗೇವಾಡಿಗೆ ತೆರಳುವುದರಿಂದ ಅಲ್ಲಿ ಪ್ರತಿಭಟನೆಗಳು ನಡೆಯುವ ಸಾಧ್ಯತೆಗಳಿವೆ,” ಎಂದು ಕೋಟ್೯ಗೆ ವಿವರಿಸಿದ್ದರು.


Share It

You cannot copy content of this page