ವಿಚ್ಛೇದನ ಪ್ರಕರಣಗಳಲ್ಲಿ ಪತಿ ಅಥವಾ ಪತ್ನಿ ಆರ್ಥಿಕವಾಗಿ ಸ್ವಾವಲಂಬಿ ಹಾಗೂ ಸ್ವತಂತ್ರರಾಗಿದ್ದಲ್ಲಿ ಜೀವನಾಂಶ ನೀಡಬೇಕಾಗಿಲ್ಲ ಎಂದು ಸೋಮವಾರ ತೀರ್ಪು ನೀಡಿರುವ ದೆಹಲಿ ಹೈಕೋರ್ಟ್, ರೈಲ್ವೆ ಅಧಿಕಾರಿ ಮಹಿಳೆಗೆ ಜೀವನಾಂಶ ನಿರಾಕರಿಸಿದೆ.
ಭಾರತೀಯ ರೈಲ್ವೆ ಸಂಚಾರ ಸೇವೆಯ ಗ್ರೂಪ್ ‘ಎ’ ಅಧಿಕಾರಿಯಾಗಿರುವ ಮಹಿಳೆಯೊಬ್ಬರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರಪಾಲ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರ ವಿಭಾಗೀಯ ಪೀಠ, “ಶಾಶ್ವತ ಜೀವನಾಂಶವನ್ನು ಸಾಮಾಜಿಕ ನ್ಯಾಯಕ್ಕಾಗಿ ನೀಡಲಾಗುತ್ತದೆಯೇ ಹೊರತು ಇಬ್ಬರು ಸಮರ್ಥ ವ್ಯಕ್ತಿಗಳ ಆರ್ಥಿಕ ಸ್ಥಿತಿಯನ್ನು ಅಳೆಯುವ ಸಾಧನವಾಗಿ ಅಲ್ಲ” ಎಂದು ಸ್ಪಷ್ಟಪಡಿಸಿದೆ.
ಹಿಂದೂ ವಿವಾಹ ಕಾಯಿದೆ ಸೆಕ್ಷನ್ 25ರ ಅಡಿಯಲ್ಲಿ, ನ್ಯಾಯಾಲಯಗಳು ಶಾಶ್ವತ ಜೀವನಾಂಶ ನೀಡುವ ಬಗ್ಗೆ ವಿವೇಚನೆ ಹೊಂದಿವೆ. ದೂರುದಾರರ ಆದಾಯ, ಗಳಿಕೆಯ ಸಾಮರ್ಥ್ಯ, ಆಸ್ತಿ, ನಡವಳಿಕೆ ಮತ್ತು ಇತರ ಸಂಬಂಧಿತ ಸಂದರ್ಭಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಪೀಠ ಹೇಳಿದೆ.
2010ರಲ್ಲಿ ವಿವಾಹವಾಗಿದ್ದ ಈ ದಂಪತಿ ಕೇವಲ ಒಂದು ವರ್ಷ ಮಾತ್ರ ಒಟ್ಟಿಗೆ ಬಾಳಿದ್ದರು. ಆಗಸ್ಟ್ 2023ರಲ್ಲಿ ಕುಟುಂಬ ನ್ಯಾಯಾಲಯವು ಇವರ ಮದುವೆಯನ್ನು ಅನೂರ್ಜಿತಗೊಳಿಸಿತ್ತು. ಪತ್ನಿಯು ಮಾನಸಿಕ ಮತ್ತು ದೈಹಿಕ ಕ್ರೌರ್ಯ, ಅವಾಚ್ಯ ಭಾಷೆ, ಅವಮಾನಕರ ಸಂದೇಶಗಳು, ವೈವಾಹಿಕ ಹಕ್ಕುಗಳ ನಿರಾಕರಣೆ ಮತ್ತು ವೃತ್ತಿಪರ, ಸಾಮಾಜಿಕ ಕ್ಷೇತ್ರಗಳಲ್ಲಿ ಅವಮಾನ ಮಾಡುತ್ತಿದ್ದಳು ಎಂದು ಪತಿ ಆರೋಪಿಸಿದ್ದರು. ಆದರೆ ಪತ್ನಿ ಈ ಆರೋಪಗಳನ್ನು ತಳ್ಳಿಹಾಕಿ, ಪತಿಯ ವಿರುದ್ಧ ಪ್ರತಿ-ಆರೋಪ ಮಾಡಿದ್ದರು. ವಿಚ್ಛೇದನಕ್ಕೆ ಒಪ್ಪಿಗೆ ನೀಡಲು ಪತ್ನಿ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಪತಿ ಬೇಡಿಕೆ ಇಟ್ಟಿದ್ದರು.
ಪತ್ನಿಯು ಕ್ರೂರವಾಗಿ ನಡೆಸಿಕೊಂಡಿದ್ದಾಳೆಂಬ ಆರೋಪದಲ್ಲಿ ಪತಿಗೆ ವಿಚ್ಛೇದನಕ್ಕೆ ಅವಕಾಶ ನೀಡಿದ ನ್ಯಾಯಾಲಯವು, ಆಕೆಗೆ ಜೀವನಾಂಶ ನಿರಾಕರಿಸಿದ ಕುಟುಂಬ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದ ಸಂದರ್ಭ ದೆಹಲಿ ಹೈಕೋರ್ಟ್ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.