ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸುತ್ತೋಲೆ ಹೊರಡಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ
ಬೆಂಗಳೂರು: ಪೊಲೀಸರು ನಾಗರಿಕರ ಹಕ್ಕುಗಳಿಗೆ ಗೌರವ ನೀಡುವ ಮೂಲಕ ಸಂಯಮದಿಂದ ವರ್ತಿಸಬೇಕು. ಅಧಿಕಾರ ದುರುಪಯೋಗ ಪಡಿಸಿಕೊಂಡು ಜನಸಾಮಾನ್ಯರ ಮೇಲೆ ದರ್ಪದ ವರ್ತನೆ ತೋರುವುದು ಇಲಾಖೆಯ ಘನತೆಗೆ ತಕ್ಕುದಾದ ನಡವಳಿಕೆಯಲ್ಲ. ಇಂತಹ ವರ್ತನೆಯನ್ನು ನಾನು ಸಹಿಸಲ್ಲ ಎಂದು ಪೊಲೀಸ್ ಸಿಬ್ಬಂದಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಅವರು, ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ. ಇಲಾಖೆಯ ಎಲ್ಲಾ ಅಧಿಕೃತ ವ್ಯವಹಾರಗಳು ಮತ್ತು ಕಾರ್ಯವಿಧಾನದಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಠಾಣೆಗೆ ಭೇಟಿ ನೀಡುವ ಯಾವುದೇ ವ್ಯಕ್ತಿಯ ಸಾಮಾಜಿಕ ಮತ್ತು ಆರ್ಥಿಕ ಹಿನ್ನಲೆ ಗಮನಿಸದೇ ಸಮಾನವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.
ವ್ಯಕ್ತಿ ಮತ್ತು ಸಂಸ್ಥೆಗಳಿಂದ ಯಾವುದೇ ಬೇಡಿಕೆ ಇಡುವುದು, ಅಕ್ರಮ ಸಹಾಯ, ಲಾಭ ಪಡೆಯಬಾರದು. ತನಿಖಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡು, ಪ್ರತಿ ಹಂತದಲ್ಲೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸಂತ್ರಸ್ತರು, ಮಹಿಳೆಯರು, ಹಿರಿಯರು ಮತ್ತು ಮಕ್ಕಳೊಂದಿಗೆ ವಿಶೇಷ ಕಾಳಜಿಯಿಂದ ವರ್ತಿಸಬೇಕು ಎಂದು ತಿಳಿಸಿದ್ದಾರೆ.
ದೂರುಗಳ ಸ್ಥಿತಿ ಮತ್ತು ಬಾಕಿ ಇರುವ ಪ್ರಕರಣಗಳ ಕುರಿತು ನಾಗರಿಕರಿಗೆ ಮಾಹಿತಿ ನೀಡಬೇಕು. ನ್ಯಾಯಾಂಗ ಮತ್ತು ಆಡಳಿತಾತ್ಮಕ ಅಧಿಕಾರಿಗಳಿಗೆ ಪೂರ್ಣ ಸಹಕಾರ ನೀಡಿ, ಶೋಧ, ಬಂಧನ ಅಥವಾ ವಿಚಾರಣೆ ವೇಳೆ ಸಾರ್ವಜನಿಕರ ಖಾಸಗಿತನ ಮತ್ತು ಘನತೆಯನ್ನು ಗೌರವಿಸಬೇಕು. ಬೇರೆ ಠಾಣಾ ವ್ಯಾಪ್ತಿಯ ದೂರು ಬಂದಲ್ಲಿ ದೂರುದಾರರನ್ನು ಸಂಬಂಧಿಸಿದ ಠಾಣೆಗೆ ಹೋಗಿ ದೂರು ನೀಡುವಂತೆ ಹೇಳದೇ, ಠಾಣೆಯಲ್ಲಿ ಶೂನ್ಯ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿ, ಬಳಿಕ ವ್ಯಾಪ್ತಿಯ ಸಂಬಂಧಪಟ್ಟ ಠಾಣೆಗೆ ದೂರು ವರ್ಗಾಯಿಸುವಂತೆ ಸ್ಪಷ್ಟವಾಗಿ ಹೇಳಿದ್ದಾರೆ.
ಮಹಿಳೆಯರನ್ನು ಸಂಜೆ 6 ಗಂಟೆಯ ಬಳಿಕ ಠಾಣೆಗೆ ವಿಚಾರಣೆಗೆ ಅಥವಾ ಹೇಳಿಕೆ ಪಡೆಯಲು ಕರೆತರಬಾರದು. ಒಂದು ವೇಳೆ ಆಕೆ ಆರೋಪಿಯಾಗಿದ್ದಲ್ಲಿ ಅಥವಾ ಸಂತ್ರಸ್ತೆಯಾಗಿದ್ದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ನೆರವಿನೊಂದಿಗೆ ಮಹಿಳೆಯು ವಾಸವಿರುವ ಮನೆಗೆ ತೆರಳಿ ವಿಚಾರಣೆ ಮಾಡಬೇಕು. ಕ್ರಿಮಿನಲ್ ಪ್ರಕರಣಗಳಲ್ಲಿ ಅವರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ, ಅವಮಾನಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು ಮತ್ತು ಅವರನ್ನು ಠಾಣೆಯಲ್ಲಿ ಇರಿಸದೇ, ಗೃಹ ಆಶ್ರಯ ತಾಣಗಳಲ್ಲಿ ಇರಿಸಬೇಕು ಎಂದು ಸುತ್ತೋಲೆಯ ಮೂಲಕ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.