ಎಲ್ಲರನ್ನೂ ಒಳಗೊಳ್ಳುವ ಗುಣ ಕನ್ನಡದ ಮಣ್ಣಿಗಿದೆ; ಇಲ್ಲಿ ಬದುಕುವ ಪ್ರತಿಯೊಬ್ಬರು ಕನ್ನಡತನ ಮೈಗೂಡಿಸಿಕೊಳ್ಳಬೇಕು: ಡಾ.ಬಿ.ನರಸಿಂಹ ಮೂರ್ತಿ
ಬೆಂಗಳೂರು: ನಗರದ ಐಟಿಪಿಎಲ್ ರಸ್ತೆಯಲ್ಲಿರುವ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ೭೦ನೇ ಕನ್ನಡ ರಾಜ್ಯೋತ್ಸವವನ್ನು ವೈಭವಯುತವಾಗಿ ಆಚರಿಸಲಾಯಿತು.
ಕರ್ನಾಟಕ ಎಂದು ಮರುನಾಮಕರಣವಾಗಿ ೫೦ ವರ್ಷಗಳು ತುಂಬಿದ ಸಂಭ್ರಮದಲ್ಲಿ “ಸಿಎಂಆರ್ ಐಟಿ “ಸಂಸ್ಕೃತಿ ಕನ್ನಡ ಸಂಘ” ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ಕೆಂಪು ಮತ್ತು ಹಳದಿ ಬಣ್ಣಗಳನ್ನು ಬಿಂಬಿಸುವ ಉಡುಪುಗಳನ್ನು ತೊಟ್ಟು ಸಂಭ್ರಮಿಸಿ ಕನ್ನಡತನ ಮೆರೆದರು.
ಕೆಂಪು ಮತ್ತು ಹಳದಿ ಬಣ್ಣದ ಹೂಗಳಿಂದ ಅಲಕೃಂತಗೊಂಡ ಕನ್ನಡಾಂಭೆಯ ಭಾವಚಿತ್ರಕ್ಕೆ ಉಪ ಪ್ರಾಂಶುಪಾಲ ಡಾ.ಬಿ.ನರಸಿಂಹ ಮೂರ್ತಿ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಅವರು ಕನ್ನಡ ಪುರಾತನ ಭಾಷೆಯಷ್ಟೆಯಲ್ಲ ಸೃಜನಶೀಲ ಸಾಹಿತ್ಯದಿಂದ ತುಂಬಿರುವ ಸಮೃದ್ಧ ಭಾಷೆ. ಇಂತಹ ಜೀವಂತಿಕೆಯುಳ್ಳ ಭಾಷೆಯನ್ನು ಯುವ ಜನಾಂಗ ಉಳಿಸಿ ಬೆಳೆಸಬೇಕು ಎಂದು ಹೇಳಿದರು. ಎಲ್ಲರನ್ನೂ ಒಳಗೊಳ್ಳುವ ಗುಣ ಕನ್ನಡದ ಮಣ್ಣಿಗಿದೆ ಇಂತಹ ನಾಡಿನಲ್ಲಿ ಬದುಕುವ ಪ್ರತಿಯೊಬ್ಬರು ಕನ್ನಡ ಭಾಷೆ ಕಲಿತು ಕನ್ನಡತನ ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಾಡು-ನುಡಿ-ಸಂಸ್ಕೃತಿ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ರಾಜ್ಯೋತ್ಸವಕ್ಕೆ ಕಲಾವಂತಿಕೆಯ ಮೆರುಗು ತುಂಬಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.