ಸುದ್ದಿ

ಪ್ರತ್ಯೇಕವಾಗಿ ಬದುಕುವ ಒಪ್ಪಂದ ಕಾನೂನುಬದ್ಧ ವಿಚ್ಛೇದನವಲ್ಲ: ಹೈಕೋರ್ಟ್

Share It

ಗಂಡ-ಹೆಂಡತಿ ಪ್ರತ್ಯೇಕವಾಗಿ ವಾಸಿಸುವ ಒಪ್ಪಂದ ಮಾಡಿಕೊಂಡು ಸಹಿ ಮಾಡಿಕೊಂಡ ದಾಖಲೆಗೆ ಯಾವುದೇ ಕಾನೂನಾತ್ಮಕ ಮಾನ್ಯತೆ ಇಲ್ಲ ಹಾಗೂ ಅಂತಹ ಒಪ್ಪಂದವನ್ನು ವಿಚ್ಛೇದನ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ.

ಪತ್ನಿ ತನ್ನಿಂದ ದೂರವಾಗಿ ಪ್ರತ್ಯೇಕವಾಗಿ ಬದುಕುವ ಒಪ್ಪಂದ ಮಾಡಿಕೊಂಡಿದ್ದಾಳೆ. ಆ ಬಳಿಕ ತನ್ನ ವಿರುದ್ಧ ಐಪಿಸಿ ಸೆಕ್ಷನ್ 498ಎ ಅಡಿ ಕೇಸ್ ದಾಖಲಿಸಿದ್ದಾಳೆ. ಪ್ರತ್ಯೇಕವಾಗಿ ಬದುಕುವ ಒಪ್ಪಂದ ಮಾಡಿಕೊಂಡ ಒಂದು ವರ್ಷದ ಬಳಿಕ ಪತ್ನಿ ಕ್ರಿಮಿನಲ್ ಕೇಸ್ ದಾಖಲಿಸಿರುವುದು ಸರಿಯಲ್ಲ ಎಂದು ಪತಿ ಮಧ್ಯಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ್ದರು. ಜತೆಗೆ ತಾವು ಪ್ರತ್ಯೇಕವಾಗಿ ವಾಸಿಸುತ್ತಿರುವುದು ವಿಚ್ಚೇದನಕ್ಕೆ ಸಮ ಎಂದು ವಾದಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ ಅವರಿದ್ದ ಪೀಠ, ದಂಪತಿ ಪ್ರತ್ಯೇಕವಾಗಿ ವಾಸಿಸುವ ಒಪ್ಪಂದ ಮಾಡಿಕೊಳ್ಳುವುದು ವಿಚ್ಛೇದನಕ್ಕೆ ಸಮವಲ್ಲ. ಪ್ರತ್ಯೇಕವಾಗಿ ವಾಸಿಸುವ ಒಪ್ಪಂದ ಮಾಡಿಕೊಂಡಾಕ್ಷಣ ಅವರ ನಡುವಿನ ಸಂಬಂಧ ಅಂತ್ಯಗೊಂಡಿದೆ ಎಂದು ಪರಿಗಣಿಸಲು ಬರುವುದಿಲ್ಲ.

ಹಾಗೆಯೇ, ನ್ಯಾಯಾಲಯದ ಆದೇಶ ಪಡೆಯದೆ ದಂಪತಿಯೇ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು ಸಾಧ್ಯವಿಲ್ಲ. ಇನ್ನು ಇಂತಹ ಒಪ್ಪಂದವನ್ನು ನೋಟರಿ ಮೂಲಕ ಮಾನ್ಯಗೊಳಿಸಿರುವುದು ಅಚ್ಚರಿ ತಂದಿದೆ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೇ, ಇಂತಹ ಪ್ರತ್ಯೇಕತೆಯ ಒಪ್ಪಂದಕ್ಕೆ ಕಾನೂನಿನಲ್ಲಿ ಯಾವುದೇ ಮಾನ್ಯತೆ ಇಲ್ಲದಿರುವುದರಿಂದ ದಂಪತಿ ವಿಚ್ಛೇದನ ಪಡೆದಿದ್ದಾರೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇನ್ನು ಪತ್ನಿ ಪತಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498ಎ ಅಡಿ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್, ಒಂದು ವೇಳೆ ಪತ್ನಿ ಪತಿಯಿಂದ ವಿಚ್ಛೇದನ ಪಡೆದಿದ್ದರೂ ವಿಚ್ಛೇದನಕ್ಕೆ ಮುಂಚಿತವಾಗಿ ಕ್ರೌರ್ಯ ನಡೆದಿದ್ದರೆ ಸಂತ್ರಸ್ತೆ ಈ ನಿಯಮದ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು ಎಂದಿದೆ.

ಪ್ರಕರಣದ ಹಿನ್ನೆಲೆ: 2022ರಲ್ಲಿ ವಿವಾಹವಾಗಿದ್ದ ದಂಪತಿ ವೈಮನಸ್ಯದಿಂದಾಗಿ ಪ್ರತ್ಯೇಕ ವಾಸಿಸುವ ಒಪ್ಪಂದ ಮಾಡಿಕೊಂಡು ದೂರವಾಗಿದ್ದರು. ಕೆಲ ಸಮಯದ ಬಳಿಕ ಗಂಡ ಮತ್ತು ಆತನ ಪೋಷಕರ ವಿರುದ್ಧ ಕಿರಿಕುಳ ಆರೋಪ ಮಾಡಿದ್ದ ಪತ್ನಿ, ಮದುವೆ ವೇಳೆ ಸಾಕಷ್ಟು ವರದಕ್ಷಿಣೆ ನೀಡಿದ್ದರೂ ಗಂಡ ಮತ್ತು ಅವರ ಕುಟುಂಬದವರು ತನಗೆ ಕಿರುಕುಳ ನೀಡಿದ್ದಾರೆ, ತನ್ನ ಮೇಲೆ ಹಲ್ಲೆ ಮಾಡಿದ್ದಾರೆ, ತವರು ಮನೆಗೆ ವಾಪಸ್ಸಾಗುವಂತೆ ಒತ್ತಾಯಿಸಿದ್ದಾರೆ ಎಂದು ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 498-A, 506, 34 ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3, 4 ಅಡಿ ಎಫ್ಐಆರ್ ದಾಖಲಿಸಿದ್ದರು.

ಸಿಆರ್ಪಿಸಿ ಸೆಕ್ಷನ್ 482 ಅಡಿ ಈ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಪತಿ, ಪತ್ನಿಯ ಆರೋಪಗಳು ಸಾಮಾನ್ಯ ಸ್ವರೂಪದ್ದಾಗಿವೆ. ಮುಖ್ಯವಾಗಿ ಪತ್ನಿ ತನ್ನಿಂದ ದೂರವಾಗುವ ಕುರಿತಂತೆ ಒಪ್ಪಂದ ಮಾಡಿಕೊಂಡಿದ್ದಾರೆ. ಜತೆಗೆ ತನ್ನ ವಿರುದ್ಧ ಕಾನೂನಿನ ಮೊರೆ ಹೋಗುವುದಿಲ್ಲ ಎಂದು ಒಪ್ಪಂದದಲ್ಲಿ ತಿಳಿಸಿದ್ದಾರೆ. ಆದ್ದರಿಂದ ಪ್ರಕರಣ ರದ್ದುಗೊಳಿಸಬೇಕು ಎಂದು ಪತಿ ಕೋರಿದ್ದರು.

ಕೇಸ್ ನಂಬರ್: MISCELLANEOUS CRIMINAL CASE No. 14908 of 2024

ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.


Share It

You cannot copy content of this page