ಬೆಳಗಾವಿ: ಅಪ್ರಾಪ್ತೆಯನ್ನು ಕಿಡ್ನ್ಯಾಪ್ ಮಾಡಿ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮೇಕಳಿ ಗ್ರಾಮದ ರಾಮಲಿಂಗ ಮಠದ ಹಠಯೋಗಿ ಲೋಕೇಶ್ವರ ಸ್ವಾಮೀಜಿಗೆ (30) ಜಿಲ್ಲಾ ಪೋಕ್ಸೊ ನ್ಯಾಯಾಲಯ 35 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹1 ಲಕ್ಷ ದಂಡ ವಿಧಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶೆ ಸಿ.ಎಂ.ಪುಷ್ಪಲತಾ ಅವರು ಅಪರಾಧಿಗೆ 35 ವರ್ಷ ಜೈಲು ಶಿಕ್ಷೆ, ₹1 ಲಕ್ಷ ದಂಡ ವಿಧಿಸಿ ಶನಿವಾರ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.
ಕಲಬುರಗಿ ಜಿಲ್ಲೆ ಚಿತ್ತಾಪುರ ಲೋಕೇಶ್ವರ ಸಾಬಣ್ಣ ಜಂಬಗಿ ಎಂಬಾತ ಮೇಕಳಿ ಗ್ರಾಮದಲ್ಲಿ ಮಠ ಕಟ್ಟಿಕೊಂಡು ಸ್ವಾಮೀಜಿ ಎಂದು ಘೋಷಿಸಿಕೊಂಡಿದ್ದ. ಇದೇ ವರ್ಷದ ಮೇ 13ರಂದು ಬಾಲಕಿಯನ್ನು ತನ್ನ ಕಾರಿನಲ್ಲಿ ಅಪಹರಿಸಿದ್ದ. ನಂತರ ಮೇ 14 ಮತ್ತು 16 ರಂದು ಅತ್ಯಾಚಾರ ಎಸಗಿದ್ದ
ಈ ಸಂಬಂಧ ಮೂಡಲಗಿ ಠಾಣೆಯಲ್ಲಿ ದೂರು ದಾಖಲಾಗಿತ್ತು . ತನಿಖಾಧಿಕಾರಿ ಶ್ರೀಶೈಲ ಬ್ಯಾಕೋಡ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕ ಎಲ್. ವಿ.ಪಾಟೀಲ ವಾದ ಮಂಡಿಸಿದರು.