ಹುಬ್ಬಳ್ಳಿ: ಅನ್ಯ ಜಾತಿಯ ಯುವಕನೊಂದಿಗೆ ಮದುವೆಯಾಗಿದ್ದ ಗರ್ಭಿಣಿಯನ್ನು ಆಕೆಯ ಮನೆಯವರೇ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿರುವ ಮರ್ಯಾದೆಗೇಡು ಘಟನೆ ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರದಲ್ಲಿ ಭಾನುವಾರ ನಡೆದಿದೆ.
ಮಾನ್ಯ ಪಾಟೀಲ (೨೦) ತಂದೆ ಹಾಗೂ ಕುಟುಂಬಸ್ಥರಿಂದಲೇ ಹತ್ಯೆಯಾದ ದುರ್ದೈವಿ. ಈ ಪ್ರಕರಣದಲ್ಲಿ ಯುವಕನ ತಂದೆ,ತಾಯಿ ಸೇರಿದಂತೆ ಯುವಕ ಸಂಬಂಧಿಕರಿಗೂ ಹಲ್ಲೆ ಮಾಡಿದ್ದು, ಇಬ್ಬರು ಗಂಭೀರವಾಗಿ ಹಲ್ಲೆಗೊಳಗಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹತ್ಯೆಗೆ ಸಂಬಂಧಿಸಿದಂತೆ ಯುವತಿ ತಂದೆ ಪ್ರಕಾಶ್ ಗೌಡ ಪಾಟೀಲ್, ವೀರನಗೌಡ ಮತ್ತು ಅರುಣಗೌಡ ಎಂಬುವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ತಿಳಿಸಿದ್ದಾರೆ.
ಏನಿದು ಪ್ರಕರಣ: ಮರ್ಯಾದೆಗೇಡು ಹತ್ಯೆಯಾದ ಮಾನ್ಯ ಪಾಟೀಲ್ ವಿವೇಕಾನಂದ ದೊಡ್ಡಮನಿ ಎಂಬ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದು ಇದಕ್ಕೆ ಯುವತಿಯ ಪೋಷಕರ ತೀವ್ರ ವಿರೋಧವಿತ್ತು. ಆದರೂ, 8 ತಿಂಗಳ ಹಿಂದೆ ಇಬ್ಬರು ಓಡಿ ಹೋಗಿ ಮದುವೆಯಾಗಿದ್ದರು. ಯುವತಿ 7 ತಿಂಗಳ ಗರ್ಭಿಣೆಯಾಗಿದ್ದರಿಂದ ದಂಪತಿ ಮರಳಿ ಇನಾಂವೀರಾಪುರ ಗ್ರಾಮಕ್ಕೆ ಬಂದಿದ್ದರು. ಈ ವಿಷಯ ತಿಳಿದ ಯುವತಿಯ ಕುಟುಂಬಸ್ಥರು ಭಾನುವಾರ ಸಾಯಂಕಾಲ ಯುವಕನ ಮನೆಗೆ ನುಗ್ಗಿ ಹಲ್ಲೆನಡೆಸಿದ್ದಾರೆ. ಈ ಘಟನೆ ಸಂಬಂಧ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.