ಬೆಂಗಳೂರು: ಸಾರ್ವಜನಿಕ ಉದ್ದೇಶಗಳಿಗಾಗಿ ಖಾಸಗಿ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡಿದ್ದರೆ, ಭೂಮಾಲೀಕರು ತಡವಾಗಿ ಪರಿಹಾರ ಕೇಳಿದರೂ ಅದನ್ನು ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕಾನೂನಿನ ಅನುಮತಿಯಿಲ್ಲದೆ ಸರ್ಕಾರ ಯಾವುದೇ ಖಾಸಗಿ ಆಸ್ತಿಯನ್ನು ಸ್ವಾಧೀನ ಪಡಿಸಿಕೊಳ್ಳುವಂತಿಲ್ಲ. ಅಂತಹ ಪ್ರಕರಣಗಳಲ್ಲಿ ಭೂಮಾಲೀಕರು ಪರಿಹಾರ ಕೇಳಲು ವಿಳಂಬ ಮಾಡಿದರೆ ಕಾನೂನು ಬದ್ದವಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹರದಗೆರೆಯ ಎಚ್.ಪಿ. ರಮೇಶ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ತಮ್ಮ ಜಮೀನನ್ನು ಶಾಲೆ ಮತ್ತು ರಸ್ತೆಗಾಗಿ ಸರ್ಕಾರ ಬಳಕೆ ಮಾಡಿಕೊಂಡಿದೆ. ಅದಕ್ಕಾಗಿ ಭೂ ಸ್ವಾಧೀನ ಪರಿಹಾರ ನೀಡಬೇಕು ಎಂದು ಅರ್ಜಿದಾರರು ಸರ್ಕಾರವನ್ನು ಕೋರಿದ್ದರು. ವಿಚಾರಣೆ ನಡೆಸಿದ ತುಮಕೂರು ಜಿಲ್ಲಾಧಿಕಾರಿ, ಅರ್ಜಿದಾರರ ಭೂಮಿಯನ್ನು ಸರ್ಕಾರ 1957ರಲ್ಲಿ ವಶಪಡಿಸಿಕೊಂಡಿದೆ. ಆಗ ಅವರು ಸ್ವಯಂಪ್ರೇರಿತರಾಗಿ ಭೂಮಿ ನೀಡಿದ್ದರು. ಆದ್ದರಿಂದ, ಈಗ ಪರಿಹಾರ ಕೇಳುತ್ತಿರುವುದು ಸರಿಯಲ್ಲ ಎಂದು ಮನವಿ ತಿರಸ್ಕರಿಸಿದ್ದರು.
ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಭೂಮಾಲೀಕರು ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಭೂಮಾಲೀಕರು ಹಲವು ದಶಕಗಳ ಕಾಲ ಪರಿಹಾರ ಕೋರಿಲ್ಲ ಎಂದು ಸರ್ಕಾರ ಪರಿಹಾರ ನಿರಾಕರಿಸಲು ಸಾಧ್ಯವಿಲ್ಲ. ಅಕ್ರಮ ಭೂಸ್ವಾಧೀನವನ್ನು ಸರ್ಕಾರವೇ ಒಪ್ಪಿಕೊಂಡಿರುವಾಗ ಪರಿಹಾರ ನೀಡುವುದು ಅನಿವಾರ್ಯ. ಅರ್ಜಿದಾರರಿಗೆ ಮೂರು ತಿಂಗಳೊಳಗೆ ಪರಿಹಾರ ನೀಡಬೇಕು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.