ಬೆಂಗಳೂರು: ಎಸ್ಸಿ, ಎಸ್ಟಿ ದೌರ್ಜನ್ಯ ತಡೆ
ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣಗಳನ್ನು ಆದ್ಯತೆಯಲ್ಲಿ ವಿಚಾರಣೆ ನಡೆಸುವಂತೆ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ಹೈಕೋರ್ಟ್ ಹೇಳಿದೆ. ದೌರ್ಜನ್ಯ ತಡೆ ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣಗಳಲ್ಲಿ ಏಕಪಕ್ಷೀಯವಾಗಿ ಮಧ್ಯಂತರ ಆದೇಶ ಅಥವಾ ವಿಚಾರಣೆಗೆ ತಡೆ ನೀಡದಂತೆ ಹೈಕೋರ್ಟ್ ಎಲ್ಲ ಪೀಠಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಬೆಂಗಳೂರಿನ ಸೋಮಶೇಖರ್ ರಾಜವಂಶಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ರೀತಿಯಾಗಿ ಹೇಳಿದೆ.
ಹೈಕೋರ್ಟ್ ನಿರ್ಧಾರದ ಮುಖ್ಯಾಂಶಗಳು:
2020 ರಿಂದ ಬಾಕಿ ಇರುವ ಪ್ರಕರಣಗಳನ್ನು ಆದ್ಯತೆಯ ಮೇಲೆ ವಿಚಾರಣೆ ನಡೆಸಲು ಸಂಬಂಧಿತ ನ್ಯಾಯಾಲಯಗಳಿಗೆ ಸೂಚಿಸಿ ಸುತ್ತೋಲೆ ಹೊರಡಿಸಲಾಗುವುದು ಎಂದು ಹೈಕೋರ್ಟ್ ಹೇಳಿದೆ.
ಏಕಪಕ್ಷೀಯ ಆದೇಶಗಳ ನಿಷೇಧ: ಪ್ರತಿವಾದಿಗಳನ್ನು ಆಲಿಸದೆ ಅಥವಾ ನೋಟಿಸ್ ಜಾರಿ ಮಾಡದೆ ತಡೆಯಾಜ್ಞೆ ನೀಡುವಂತಿಲ್ಲ. ಕಾಯ್ದೆಯ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಈ ಕಾಯ್ದೆಯನ್ನು ದೌರ್ಜನ್ಯಕ್ಕೆ ಒಳಗಾದವರ ರಕ್ಷಣೆಗಾಗಿ ರೂಪಿಸಲಾಗಿದೆ ಮತ್ತು ಅದರ ನಿಬಂಧನೆಗಳನ್ನು ಸರಿಯಾಗಿ ಪಾಲಿಸಬೇಕೆಂದು ವಕೀಲರು ಪೀಠಕ್ಕೆ ಒತ್ತಾಯಿಸಿದರು.