ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯ, ಬಿಜೆಪಿ ಮುಖಂಡ ಯೋಗೇಶ್ ಗೌಡ
ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಸುಪ್ರೀಂಕೋರ್ಟ್ ಜಾಮೀನು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ ವಿನಯ್ ಕುಲಕರ್ಣಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸುನೀಲ್ ದತ್ತ ಯಾದವ್ ಅವರು ಅರ್ಜಿದಾರರಿಗೆ ಸುಪ್ರೀಂಕೋರ್ಟ್ ಜಾಮೀನು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವುದು ಉತ್ತಮ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಅರ್ಜಿಗೆ ಸಂಬಂಧಿಸಿದಂತೆ ಅರ್ಜಿದಾರರ ಪರ ವಕೀಲರು, ಕೊಲೆ ಪ್ರಕರಣದಲ್ಲಿ ಅರ್ಜಿದಾರರ ಯಾವುದೇ ಪಾತ್ರವಿಲ್ಲ. ಕೊಲೆಯಾದ ಸ್ಥಳದಲ್ಲಿಯೂ ಹಾಜರಿರಲಿಲ್ಲ. ಪ್ರಕರಣದಲ್ಲಿ ಇತರೆ ಆರೋಪಿಗಳಿಗೆ ಈಗಾಗಲೇ ಜಾಮೀನು ಮಂಜೂರಾಗಿದೆ.
ಅಲ್ಲದೆ, ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಿರುವುದು ತಪ್ಪು ಎಂದು ಸುಪ್ರೀಂಕೋರ್ಟ್ ತಿಳಿಸಿಲ್ಲ. ಆದರೆ, ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಮಾತ್ರ ಜಾಮೀನು ರದ್ದುಮಾಡಿ ಆದೇಶಿಸಿದ್ದು, ಆದೇಶದಲ್ಲಿ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಬಹುದು ಎಂಬುದಾಗಿ ತಿಳಿಸಿದೆ. ಹಾಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.