ದಾವಣಗೆರೆ: ನವ ವಿವಾಹಿತೆ ಪ್ರಿಯಕರನೊಂದಿಗೆ ಪರಾರಿಯಾಗಿದ್ದರಿಂದ ಮನನೊಂದ ಪತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರೆ, ಮದುವೆ ಮಾಡಿಸಿದ್ದ ವಧುವಿನ ಸೋದರ ಮಾವ ವಿಷ ಸೇವಿಸಿ ಆತ್ಮಹತ್ಯೆ ಶರಣಾಗಿರುವ ದಾರುಣ ಘಟನೆ ದಾವಣಗೆರೆ ತಾಲೂಕಿನಲ್ಲಿ ನಡೆದಿದೆ.
ದಾವಣಗೆರೆ ತಾಲೂಕಿನ ಗುಮ್ಮನೂರು ಗ್ರಾಮದ ಹರೀಶ್(30), ದಾವಣಗೆರೆಯ ಆನೆಕೊಂಡದ ರುದ್ರೇಶ್(36) ಆತ್ಮಹತ್ಯೆ ಮಾಡಿಕೊಂಡವರು.
ಎರಡೂವರೆ ತಿಂಗಳ ಹಿಂದೆಯಷ್ಟೇ ಆನೆಕೊಂಡ ಗ್ರಾಮದ ಸರಸ್ವತಿಯನ್ನು ಹರೀಶ್ ವಿವಾಹವಾಗಿದ್ದರು. ಮದುವೆ ಆಗಿ ಎರಡೂವರೆ ತಿಂಗಳ ಬಳಿಕ ಸರಸ್ವತಿ ದೇವಾಲಯಕ್ಕೆ ಹೋಗಿಬರುತ್ತೇನೆಂದು ಹೋದವಳು ಕುಮಾರ್ ಎಂಬ ಪರಪುರುಷನೊಂದಿಗೆ ಪರಾರಿಯಾಗಿದ್ದಳು ಎಂದು ಆರೋಪಿಸಲಾಗಿದೆ.
ಸರಸ್ವತಿ ಹಾಗೂ ಹರೀಶ್ ಗೆ ವಧು ಸರಸ್ವತಿಯ ಸೋದರ ಮಾವ ರುದ್ರೇಶ್ ತಾನೇ ಮುಂದೆ ನಿಂತು ಈ ಮದುವೆ ಮಾಡಿಸಿದ್ದರು. ಆರಂಭದಿಂದ ಮದುವೆಯವರೆಗೂ ಎಲ್ಲಾ ಜವಾಬ್ದಾರಿಯನ್ನು ರುದ್ರೇಶ್ ಅವರೇ ನೋಡಿಕೊಂಡಿದ್ದರು.
ಪರ ಪುರುಷನೊಂದಿಗೆ ಓಡಿ ಹೋಗಿ ಇಬ್ಬರ ಸಾವಿಗೆ ಕಾರಣವಾದ ಸರಸ್ವತಿ ಸೇರಿದಂತೆ ಆಕೆಯ ಕುಟುಂಬಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹರೀಶ್ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಅಲ್ಲದೇ, ದಾವಣಗೆರೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಹರೀಶ್ ಬರೆದ ಡೆತ್ ನೋಟ್‌ನಲ್ಲಿ ಏನಿದೆ?: ಪತ್ನಿ
ಬೇರೆಯವನೊಂದಿಗೆ ಹೋಗಿದ್ದರೂ ಪತ್ನಿಯ ಕುಟುಂಬದವರು ನನಗೆ ಬೆದರಿಕೆ ಹಾಕುತ್ತಿದ್ದರು. ನನಗೆ ಹಣ ಆಸ್ತಿಗಿಂತ ಮಾನ ಮರ್ಯಾದೆ ಮುಖ್ಯ. ಹಾಗಾಗಿ ಇಂತವರ ವಿರುದ್ಧ ಸೂಕ್ರ ಕಾನೂನು ಕ್ರಮ ಕೈಗೊಳ್ಳುವ ಭರವಸೆ ಇದೆ. ಪತ್ನಿ ಸರಸ್ವತಿ,ಗಣೇಶ್, ಆಂಜೀನಮ್ಮ ಈ ಮೂವರು ನನ್ನ ಸಾವಿಗೆ ಕಾರಣ ಎಂದು ಹರೀಶ್ ಆತ್ಮಹತ್ಯೆಗೂ ಮುನ್ನ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಪತ್ತೆಯಾಗಿದೆ ಎನ್ನಲಾಗಿದೆ.