ಸುದ್ದಿ

ಪ್ರವಾಸಕ್ಕೆ ತೆರಳಿದ್ದಾಗ ಭೀಕರ ರಸ್ತೆ ಅಪಘಾತ: ಇಂಜಿನಿಯರ್ ವಿದ್ಯಾರ್ಥಿನಿ ದುರಂತ ಸಾವು

Share It

​ಸುಳ್ಯ: ವಾರಾಂತ್ಯದ ಪ್ರವಾಸಕ್ಕೆಂದು ತೆರಳಿದ್ದಾಗ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುಳ್ಯ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಕ್ಷಿಪ್ರಾ (27) ಅವರು ಮೃತಪಟ್ಟಿದ್ದಾರೆ. ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಸುಳ್ಯದ ಕಂದಡ್ಕ ನಿವಾಸಿ ಶಶಿಕಲಾ ಭಟ್ ಅವರ ಏಕೈಕ ಪುತ್ರಿ ಕ್ಷಿಪ್ರಾ ಅವರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ವಾರಾಂತ್ಯದ ರಜೆಯ ಪ್ರಯುಕ್ತ ತಮ್ಮ ಸಹೋದ್ಯೋಗಿಗಳೊಂದಿಗೆ ಆಂಧ್ರಪ್ರದೇಶಕ್ಕೆ ಪ್ರವಾಸಕ್ಕೆ ತೆರಳಿದ್ದರು. ಶನಿವಾರ ರಾತ್ರಿ ಇವರು ಪ್ರಯಾಣಿಸುತ್ತಿದ್ದ ಕಾರು ಕರ್ನೂಲ್ ಸಮೀಪ ತಲುಪಿದಾಗ, ಚಾಲಕನಿಗೆ ಮಂಪರು ಆವರಿಸಿ ಕಾರಿನ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ಈ ವೇಳೆ ವೇಗವಾಗಿದ್ದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡ ಕ್ಷಿಪ್ರಾ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದ ಉಳಿದ ಮೂವರು ಸಹೋದ್ಯೋಗಿಗಳು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

​ಮನೆಗೆ ಆಧಾರವಾಗಿದ್ದ ಮಗಳು:
ಸುಳ್ಯದ ಕೆವಿಜಿ ಕಾಲೇಜಿನಲ್ಲಿ ಡಿಪ್ಲೊಮಾ ಪೂರೈಸಿದ್ದ ಕ್ಷಿಪ್ರಾ, ಬಳಿಕ ನಿಟ್ಟೆ ಕಾಲೇಜಿನಲ್ಲಿ ಎಂಟೆಕ್ ಪದವಿ ಪಡೆದಿದ್ದರು. ತಂದೆಯನ್ನು ಮೊದಲೇ ಕಳೆದುಕೊಂಡಿದ್ದ ಇವರು, ತಾಯಿ ಶಶಿಕಲಾ ಅವರಿಗೆ ಏಕೈಕ ಆಧಾರ ಸ್ತಂಭವಾಗಿದ್ದರು. ಬೆಂಗಳೂರಿನಲ್ಲಿ ತಾಯಿಯ ಜೊತೆಗೇ ನೆಲೆಸಿದ್ದ ಇವರು, ಇಡೀ ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದರು. ಅಕಾಲಿಕವಾಗಿ ಸಂಭವಿಸಿದ ಈ ದುರಂತ ಸಾವು ಕುಟುಂಬಸ್ಥರನ್ನು ಮತ್ತು ಕಂದಡ್ಕ ಗ್ರಾಮಸ್ಥರನ್ನು ಕಣ್ಣೀರಲ್ಲಿ ಮುಳುಗಿಸಿದೆ.


Share It

You cannot copy content of this page