ಬೆಂಗಳೂರು: ದಲಿತರ ನಿಂದನೆ ಆರೋಪ ಪ್ರಕರಣದಲ್ಲಿ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರನ್ನು ಬಂಧಿಸಿ, ಹಾಜರುಪಡಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು, ಶಾಸಕರ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಿ, ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ್ದಾರೆ.
ಏನಿದು ಪ್ರಕರಣ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಬಿ.ಪಿ.ಹರೀಶ್ ಅವರನ್ನು ಅಭಿನಂದಿಸಲು 2023ರ ಮೇ 16ರಂದು ಹರಿಹರ ನಗರಸಭೆಯ ಪೌರಕಾರ್ಮಿಕರು ಹಾಗೂ ಮಾದಿಗ ಸಮಾಜದ ಮುಖಂಡರು ಆಗಮಿಸಿದ್ದರು. ಈ ವೇಳೆ ಒಳಮೀಸಲಾತಿ ನೀಡಿದ್ದರೂ ನಿಮ್ಮ ಸಮಾಜದವರು ನಮ್ಮ ಪಕ್ಷವನ್ನು ಬೆಂಬಲಿಸಿಲ್ಲ, ನಿಮಗೆ ಕೃತಜ್ಞತೆಯಿಲ್ಲ ಎಂದು ಜಾತಿಯ ಹೆಸರನ್ನು ಉಲ್ಲೇಖಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಆರೋಪಿಸಲಾಗಿತ್ತು.
ಈ ಸಂಬಂಧ ಬಿಎಸ್ಪಿ ಪಕ್ಷದ ಮುಖಂಡರೊಬ್ಬರು ನೀಡಿದ ದೂರಿನ ಮೇರೆಗೆ ಶಾಸಕ ಹರೀಶ್ ವಿರುದ್ಧ ಹರಿಹರ ಟೌನ್ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿತ್ತು.