ಸುದ್ದಿ

ವಿದ್ಯಾರ್ಥಿ ಗುರುಕಿರಣ್ ಸಾವು ಪ್ರಕರಣ; ಶಿಕ್ಷಕನ ಹಲ್ಲೆಯಿಂದಲ್ಲ, ಹೃದಯಸ್ತಂಭನದಿಂದ ಸಾವು ಎಂಬುದು ಪೋಸ್ಟ್‌ಮಾರ್ಟಂನಲ್ಲಿ ಪತ್ತೆ !

Share It

​ಬೆಂಗಳೂರು: ನಿನ್ನೆ ನಡೆದ ಬಾಗಲೂರು ಸಮೀಪದ ಸ್ಟರ್ಲಿಂಗ್ ವಸತಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಗುರುಕಿರಣ್ ಸಾವಿನ ಪ್ರಕರಣಕ್ಕೆ ಈಗ ಮಹತ್ವದ ತಿರುವು ಸಿಕ್ಕಿದೆ. ವಿದ್ಯಾರ್ಥಿಯ ಸಾವಿಗೆ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ್ ಅವರ ಹಲ್ಲೆ ಕಾರಣವಲ್ಲ, ಬದಲಿಗೆ ಹೃದಯಸ್ತಂಭನ (Heart Attack) ಕಾರಣ ಎಂಬುದು ಪ್ರಾಥಮಿಕ ಪೋಸ್ಟ್‌ಮಾರ್ಟಂ ವರದಿ ಹಾಗೂ ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ.

ವಸತಿ ಶಾಲೆಯ ಸ್ನಾನಗೃಹದಲ್ಲಿ ಕೂಡಿ ಹಾಕಿ ಗುರು ಕಿರಣ್ ಮೇಲೆ ಶಿಕ್ಷಕ ನಾರಾಯಣ್ ಹಲ್ಲೆ ನಡೆಸಿದ್ದಾಗಿ ಮೃತನ ಸಹಪಾಠಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ನಾನಗೃಹದ ಬಳಿಯ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಪರಿಶೀಲಿಸಲಾಯಿತು. ಅದರಲ್ಲಿ ಶಿಕ್ಷಕ ಹಾಗೂ ವಿದ್ಯಾರ್ಥಿ ಚಲನವಲನ ಪತ್ತೆಯಾಗಿಲ್ಲ. ಬಳಿಕ ಈ ಬಗ್ಗೆ ವಿದ್ಯಾರ್ಥಿಗಳನ್ನು ಮತ್ತೆ ವಿಚಾರಣೆ ನಡೆಸಿದಾಗ ತಪ್ಪು ಮಾಹಿತಿ ನೀಡಿರುವುದಾಗಿ ಪೊಲೀಸರಿಗೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ ಸಾಂದರ್ಭಿಕ ಸಾಕ್ಷ್ಯ ಅವಲೋಕಿಸಿದಾಗ ವಿದ್ಯಾರ್ಥಿ ಸಾವಿಗೂ ಮುನ್ನ ಶಿಕ್ಷಕ ಹಲ್ಲೆ ನಡೆಸಿಲ್ಲ ಎಂಬುದು ಸ್ಪಷ್ಟವಾಗಿದೆ. ಮೃತ ವಿದ್ಯಾರ್ಥಿ ತಂದೆ ದೂರು ಆಧರಿಸಿ ಕೊಲೆ ಪ್ರಕರಣ ದಾಖಲಾಗಿದೆ. ಹಾಗಾಗಿ ವಿಚಾರಣೆಗೆ ಹಾಜರಾಗುವಂತೆ ಶಿಕ್ಷಕರು ಹಾಗೂ ಆಡಳಿತ ಮಂಡಳಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

​ಮೈದಾನದಲ್ಲಿ ಜಾಗಿಂಗ್ ಮಾಡುವಾಗ ದುರಂತ: ಮೃತ ಗುರುಕಿರಣ್ ಶಾಲಾ ಮೈದಾನದಲ್ಲಿ ಜಾಗಿಂಗ್ ಮಾಡುತ್ತಿದ್ದಾಗ ಹೃದಯಸ್ತಂಭನಕ್ಕೊಳಗಾಗಿ ಸಾವನ್ನಪ್ಪಿರುವುದು ಪೋಸ್ಟ್‌ಮಾರ್ಟಂನಲ್ಲಿ ಪತ್ತೆಯಾಗಿದೆ. ಪೊಲೀಸರು ಸದ್ಯ ಅಂತಿಮ ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದಾರೆ.


Share It

You cannot copy content of this page