ಸುದ್ದಿ

ವರದಕ್ಷಿಣೆ ಕಿರುಕುಳ ಹಾಗೂ ಪತ್ನಿಗೆ ಮಚ್ಚು ತೋರಿಸಿ ಬೆದರಿಕೆ: ಪಿಎಸ್‌ಐ ಬಂಧನ

Share It

​ಬೆಂಗಳೂರು: ವರದಕ್ಷಿಣೆಗಾಗಿ ಪತ್ನಿಗೆ ಮಾನಸಿಕ ಹಾಗೂ ದೈಹಿಕವಾಗಿ ತೀವ್ರ ಕಿರುಕುಳ ನೀಡಿ, ಮಚ್ಚಿನಿಂದ ಮಾರಣಾಂತಿಕ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ನಗರ ಪೊಲೀಸ್ ಕಮಿಷನರ್ ಕಚೇರಿಯ ಕಂಟ್ರೋಲ್ ರೂಮ್ ವಿಭಾಗದ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಕೆ. ಎಸ್. ಭೈರಪ್ಪ ಎಂಬುವವರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

​ಭೈರಪ್ಪ ಅವರ ಪತ್ನಿ ರೇವತಿ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಘಟನೆ ನಡೆದ ಸ್ಥಳದ ವ್ಯಾಪ್ತಿಯನ್ನು ಆಧರಿಸಿ ಪ್ರಕರಣವನ್ನು ಮುಂದಿನ ತನಿಖೆಗಾಗಿ ತಾವರೆಕೆರೆ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ನೈಋತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್ ತಿಳಿಸಿದ್ದಾರೆ.

​ಆರಂಭದಲ್ಲಿ ರೇವತಿ ಅವರು ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ಜುಲೈ 13 ರಂದು ಕೇವಲ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಂಡಿದ್ದರು. ಇದರಿಂದ ಧೃತಿಗೆಡದ ರೇವತಿ, ತಕ್ಷಣವೇ ಉನ್ನತ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ತನಗಾದ ಅನ್ಯಾಯವನ್ನು ವಿವರಿಸಿ, ಎಫ್‌ಐಆರ್ ದಾಖಲಿಸುವಂತೆ ಮನವಿ ಮಾಡಿದ್ದರು. ಹಿರಿಯ ಅಧಿಕಾರಿಗಳ ಸೂಚನೆಯ ಬೆನ್ನಲ್ಲೇ ಎಫ್‌ಐಆರ್ ದಾಖಲಿಸಿಕೊಂಡ ಕೆಂಗೇರಿ ಪೊಲೀಸರು ಆರೋಪಿ ಪಿಎಸ್‌ಐ ಭೈರಪ್ಪನನ್ನು ಜೈಲಿಗಟ್ಟಿದ್ದಾರೆ.

​ವರದಕ್ಷಿಣೆಗಾಗಿ ಕಿರುಕುಳ ಆರೋಪ;
​ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚನಾಪುರ ನಿವಾಸಿಯಾಗಿರುವ ಪಿಎಸ್‌ಐ ಭೈರಪ್ಪ ಮತ್ತು ರೇವತಿ ಅವರ ವಿವಾಹ 5 ವರ್ಷಗಳ ಹಿಂದೆ ನಡೆದಿತ್ತು. ಈ ದಂಪತಿಗೆ 3 ವರ್ಷದ ಹೆಣ್ಣು ಮಗುವಿದೆ.

​”ನಾನು ಪಿಎಸ್‌ಐ ಆಗಿದ್ದೇನೆ, ಮದುವೆ ವೇಳೆ ನೀನು ಸೂಕ್ತ ವರದಕ್ಷಿಣೆ ತಂದಿಲ್ಲ. ಆದ್ದರಿಂದ ತವರು ಮನೆಯಿಂದ 50 ಲಕ್ಷ ರೂ. ಹಣ ತರಬೇಕು ಎಂದು ಪತಿ ಭೈರಪ್ಪ ಪೀಡಿಸುತ್ತಿದ್ದರು. ಇದಕ್ಕೆ ಅವರ ಕುಟುಂಬದವರೂ ಸಾಥ್ ನೀಡಿ ಕಿರುಕುಳ ನೀಡುತ್ತಿದ್ದರು. ಹಣ ತರಲು ನಿರಾಕರಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಪ್ರಶ್ನಿಸಲು ಬಂದ ನನ್ನ ತಂದೆಗೂ ಮಚ್ಚು ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ,” ಎಂದು ರೇವತಿ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

​ಹಲ್ಲೆಗೆ ಯತ್ನಿಸಿದ ಆರೋಪ;
​ದಂಪತಿ ನಡುವಿನ ಕೌಟುಂಬಿಕ ಕಲಹ ಇತ್ತೀಚೆಗೆ ತಾರಕಕ್ಕೇರಿತ್ತು. ಈ ವೇಳೆ ಕೋಪೋದ್ರಿಕ್ತನಾದ ಭೈರಪ್ಪ, ಮನೆಯಲ್ಲಿದ್ದ ಮಚ್ಚನ್ನು ಹಿಡಿದು ಪತ್ನಿ ರೇವತಿ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ತಾವರೆಕೆರೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


Share It

You cannot copy content of this page