ಸುದ್ದಿ

ಶಾಲಾ ಬಸ್‌ನಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆ ಶಾಲೆಯ ಜವಾಬ್ದಾರಿ; ಶಾಲೆಯ ವಿರುದ್ಧದ ಎಫ್‌ಐಆ‌ರ್ ರದ್ದತಿಗೆ ಹೈಕೋರ್ಟ್ ನಕಾರ

Share It

ಬೆಂಗಳೂರು: ಶಾಲಾ ಬಸ್ ಶಾಲಾ ಆವರಣದಲ್ಲಿ ಮಾತ್ರವಲ್ಲದೆ ಮಗು ಬಸ್‌ ಹತ್ತಿದಾಗಿನಿಂದ ಸುರಕ್ಷಿ ತವಾಗಿ ಪೋಷಕರಲ್ಲಿಗೆ ಸೇರುವವರೆಗೂ ಮಗುವಿನ ಸುರಕ್ಷತೆ ಶಾಲೆಯದ್ದೇ ಆಗಿರುತ್ತದೆ ಎಂದು ಹೈಕೋರ್ಟ್ ಹೇಳಿದೆ.

ಶಾಲಾ ಬಸ್ ಅಪಘಾತದಲ್ಲಿ 4ನೇ ತರಗತಿ ವಿದ್ಯಾರ್ಥಿಯೊಬ್ಬ ಕಣ್ಣು ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಮದ್ದೂರಿನ ದಿವ್ಯ ಜ್ಯೋತಿ ಶಾಲಾ ಆಡಳಿತ ಮಂಡಳಿ ವಿರುದ್ಧ ದಾಖಲಾಗಿರುವ ಎಫ್‌ಆರ್ ಆರ್ ರದ್ದತಿಗೆ ನಿರಾಕರಿಸಿದೆ.

ಶಾಲಾ ಬಸ್ ಅಪಘಾತ ಸಂಬಂಧ ತನ್ನ ವಿರುದ್ದದ ಎಫ್‌ಐಆರ್‌ರದ್ದು ಪಡಿಸುವಂತೆ ಕೋರಿ ಶಾಲಾ ಆಡಳಿತ ಮಂಡಳಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗ ಪ್ರಸನ್ನ ಅವರ ಪೀಠ ಶಾಲಾ ಬಸ್‌ನಲ್ಲಿ ಮಕ್ಕಳ ಸುರಕ್ಷತೆ ಎನ್ನುವುದು ಕೇವಲ ದಾಕ್ಷಿಣ್ಯ ಅಥವಾ ಅನುಕೂಲದ ವಿಷಯವಲ್ಲ. ಇದು ‘ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಿಯಮಾವಳಿಗಳು 2018’ರ ಅಡಿ ಕಡ್ಡಾಯವಾಗಿ ಪಾಲಿಸಬೇಕಾದ ಶಾಸನಬದ್ಧ ಜವಾಬ್ದಾರಿಯಾಗಿದೆ.

ಮಗು ಶಾಲಾ ಬಸ್ ಹತ್ತಿದ ಮೇಲೆ, ಕೊನೆಯ ಸ್ಟಾಪ್ ಬರುವವರೆಗೂ ಶಾಲಾ ಮಂಡಳಿ ತಾನು ಹೊಣೆಗಾರರಲ್ಲ ಎಂದು ಹೇಳಲಾಗುವುದಿಲ್ಲ. ಹೀಗಾಗಿ, ಘಟನೆ ನಡೆದ ಸಂದರ್ಭದಲ್ಲಿ ಬಸ್‌ನಲ್ಲಿ ಅಟೆಂಡ‌ರ್ ಇದ್ದರೇ? ಸಿಸಿಟಿವಿ ಕೇವಲ ‘ಅಲಂಕಾರಿಕ ವಸ್ತು’ ಆಗಿತ್ತೇ ಅಥವಾ ಚಾಲನೆಯಲ್ಲಿತ್ತೇ? ನಿಷೇಧಿತ ಅಥವಾ ಅಪಾಯಕಾರಿ ವಸ್ತುಗಳನ್ನು ಮಕ್ಕಳು ಬಸ್‌ನ ಒಳಗೆ ತರಲು ಹೇಗೆ ಸಾಧ್ಯವಾಯಿತು? ಈ ಎಲ್ಲ ಪ್ರಶ್ನೆಗಳಿಗೆ ತನಿಖೆಯಿಂದಲೇ ಉತ್ತರ ಸಿಗಬೇಕಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಮಗುವೊಂದು ಇಡೀ ಜೀವನವನ್ನು ದೃಷ್ಟಿಹೀನತೆಯ ಶಾಪದೊಂದಿಗೆ ಕಳೆಯುವಂತಾಗಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ, ತನಿಖೆಯ ಆರಂಭಿಕ ಹಂತದಲ್ಲೇ ಪ್ರಕರಣ ರದ್ದುಗೊಳಿಸಲು ಸಾಧ್ಯವಿಲ್ಲ. ಪೂರ್ಣ ಪ್ರಮಾಣದ ತನಿಖೆಯ ನಂತರವಷ್ಟೇ ಸಾಬೀತಾಗಬೇಕು ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.


Share It

You cannot copy content of this page