ಸುದ್ದಿ

ಜಾಮೀನಿನ ಮೇಲೆ ಹೊರಗೆ ಬಂದಿದ್ದ ಪೋಕ್ಸೋ ಆರೋಪಿಯಿಂದ ಭೀಕರ ಕೃತ್ಯ: ಸಂತ್ರಸ್ತ ಬಾಲಕಿ ಸೇರಿ 6 ಜನರ ಹತ್ಯೆ

Share It

ಹೈದರಾಬಾದ್‌: ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಕಾಮುಕನೊಬ್ಬ, ಸಂತ್ರಸ್ತ ಬಾಲಕಿ ಹಾಗೂ ಆಕೆಯ ಕುಟುಂಬಸ್ಥರು ಸೇರಿದಂತೆ ಒಟ್ಟು ಆರು ಜನರನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

​ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಕಳೆದ ಮೇ ತಿಂಗಳಲ್ಲಿ 35 ವರ್ಷದ ಪಿ. ರಾಜ್‌ಕುಮಾರ್ ಎಂಬಾತನ ವಿರುದ್ಧ ಬಾಲಕಿಯ ಕುಟುಂಬಸ್ಥರು ಪೋಕ್ಸ್‌ ಕಾಯ್ದೆಯಡಿ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದರು. ಆದರೆ, ಬಂಧನಕ್ಕೊಳಗಾದ ಕೇವಲ ಎರಡೇ ದಿನಗಳಲ್ಲಿ ಆತ ಜಾಮೀನು ಪಡೆದು ಹೊರಗೆ ಬಂದಿದ್ದನು. ತನ್ನ ವಿರುದ್ಧ ದೂರು ನೀಡಿದ್ದಕ್ಕೆ ತೀವ್ರ ವಿಚಲಿತನಾಗಿದ್ದ ಆರೋಪಿ, ದ್ವೇಷ ಸಾಧಿಸಲು ಹೊಂಚು ಹಾಕುತ್ತಿದ್ದನು ಎನ್ನಲಾಗಿದೆ.

​ಸೇಡಿನ ಜ್ವಾಲೆಯಲ್ಲಿ ಬೆಂದ ಆರೋಪಿ ರಾಜ್‌ಕುಮಾರ್ ಚಾಕು ಮತ್ತು ಕುಡುಗೋಲಿನಿಂದ ಮೊದಲು ಸಂತ್ರಸ್ತ ಬಾಲಕಿ, ಆಕೆಯ ತಾಯಿ ಹಾಗೂ ಅಜ್ಜಿಯನ್ನು ಕುತ್ತಿಗೆ ಸೀಳಿ ಭೀಕರವಾಗಿ ಕೊಂದಿದ್ದಾನೆ. ಅಷ್ಟಕ್ಕೇ ನಿಲ್ಲದ ಆತನ ರಕ್ತಪಿಪಾಸು ಪ್ರವೃತ್ತಿ, ಅದೇ ಶುಕ್ರವಾರ ರಾತ್ರಿ ತನ್ನ ಸ್ವಂತ ಪತ್ನಿ ಮತ್ತು ಇಬ್ಬರು ಮಕ್ಕಳನ್ನೂ ಸಹ ಅಮಾನವೀಯವಾಗಿ ಹತ್ಯೆಗೈದಿದ್ದಾನೆ. ಕೃತ್ಯದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪೋಷಕರೇ ಈ ನರಮೇಧದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

​”ಒಂದೆರಡು ವಾರದಲ್ಲಿ ಇಡೀ ಕುಟುಂಬವನ್ನು ಮುಗಿಸುವುದಾಗಿ ಆ ಪಾಪಿ ಬೆದರಿಕೆ ಹಾಕಿದ್ದ. ಬಾಲಕಿಗೆ ಕಿರುಕುಳ ನೀಡಿದ್ದಕ್ಕೆ ನಾವು ದೂರು ನೀಡಿದ್ದೆವು. ಆದರೆ ಅಧಿಕಾರಿಗಳಿಗೆ ಲಂಚ ನೀಡಿ ಎರಡೇ ದಿನದಲ್ಲಿ ಹೊರಬಂದಿದ್ದಾನೆ. ಪೊಲೀಸರ ಬೇಜವಾಬ್ದಾರಿಯೇ ಈ ಇಡೀ ಕುಟುಂಬದ ಸಾಮೂಹಿಕ ಹತ್ಯೆಗೆ ಕಾರಣ” ಎಂದು ಮೃತ ಬಾಲಕಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಘಟನಾ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತ ಕುಟುಂಬವನ್ನು ಕೊಂದ ಬೆನ್ನಲ್ಲೇ ಆರೋಪಿ ತನ್ನ ಸ್ವಂತ ಕುಟುಂಬವನ್ನೂ ಏಕಾಗಿ ಕೊಂದಿದ್ದಾನೆ ಎಂಬ ಪ್ರಶ್ನೆಗೆ ತನಿಖೆಯ ಬಳಿಕವಷ್ಟೇ ನಿಖರ ಕಾರಣ ತಿಳಿಯಬೇಕಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಸರಣಿ ಹಂತಕ ರಾಜ್‌ಕುಮಾರ್ ಪತ್ತೆಗಾಗಿ ಪೊಲೀಸರು ವಿಶೇಷ ಜಾಲ ಬೀಸಿದ್ದಾರೆ.


Share It

You cannot copy content of this page