ಬೆಂಗಳೂರು: ದಕ್ಷಿಣ ಭಾರತದಲ್ಲಿ ‘ಅಲ್ ಹಿಂದ್ ಐಸಿಸ್’ ಭಯೋತ್ಪಾದಕ ಸಂಘಟನೆಯ ಮೂಲಕ ವಿಧ್ವಂಸಕ ಕೃತ್ಯಗಳನ್ನು ಎಸಗಲು ಪಿತೂರಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಮೊಹಮ್ಮದ್ ಹನೀಫ್ ಖಾನ್‌ನನ್ನು ದೋಷಿ ಎಂದು ಘೋಷಿಸಿರುವ ಬೆಂಗಳೂರಿನ ಎನ್‌ಐಎ (NIA) ವಿಶೇಷ ನ್ಯಾಯಾಲಯವು 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 48 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಎನ್‌ಐಎ ಒಟ್ಟು 20 ಮಂದಿ ಶಂಕಿತ ಉಗ್ರರನ್ನು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಈ ಪೈಕಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದ ಮೊದಲ ಅಪರಾಧಿ ಮೊಹಮ್ಮದ್ ಹನೀಫ್ ಖಾನ್ ಆಗಿದ್ದಾನೆ.
ತಪ್ಪೊಪ್ಪಿಕೊಂಡಿದ್ದ ಅಪರಾಧಿ;
ಕಳೆದ ಅಕ್ಟೋಬರ್‌ನಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯವು ಈ ಪ್ರಕರಣದ ವಿಚಾರಣೆಯನ್ನು ಆರಂಭಿಸಿತ್ತು. ವಿಚಾರಣೆಯ ಸಂದರ್ಭದಲ್ಲಿ ಆರೋಪಿ ಹನೀಫ್ ಖಾನ್ ತನ್ನ ಮೇಲಿನ ಅಪರಾಧಗಳನ್ನು ಒಪ್ಪಿಕೊಂಡಿದ್ದ. ಅಲ್ ಹಿಂದ್ ಐಸಿಸ್ ಸಂಘಟನೆಯ ಸದಸ್ಯರಿಗೆ ರಹಸ್ಯವಾಗಿ ಶಸ್ತ್ರಾಸ್ತ್ರ ಹಾಗೂ ದೈಹಿಕ ತರಬೇತಿ ನೀಡಲು ಸ್ಥಳಗಳನ್ನು ಗುರುತಿಸುವ ಜವಾಬ್ದಾರಿಯನ್ನು ಈತ ಹೊತ್ತಿದ್ದ. ಇದಕ್ಕಾಗಿ ಚಾಮರಾಜನಗರ ಜಿಲ್ಲೆಯ ಶಿವನಸಮುದ್ರ ಮತ್ತು ಗುಂಡ್ಲುಪೇಟೆಯ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದ್ದ ತಂಡದಲ್ಲಿ ಈತ ಸಕ್ರಿಯನಾಗಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಎನ್‌ಐಎ ತನಿಖೆಯ ಪ್ರಕಾರ, ಪ್ರಕರಣದ ಪ್ರಮುಖ ಸೂತ್ರಧಾರ ಮೆಹಬೂಬ್ ಪಾಷಾ ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿರುವ ತನ್ನ ಮನೆಯನ್ನೇ ಉಗ್ರ ಚಟುವಟಿಕೆಗಳ ಕೇಂದ್ರವಾಗಿಸಿಕೊಂಡಿದ್ದ. ಅಲ್ಲಿ ನಡೆದ ಹಲವು ರಹಸ್ಯ ಸಭೆಗಳಲ್ಲಿ ದೇಶದಲ್ಲಿ ಕೋಮು ಗಲಭೆ ಸೃಷ್ಟಿಸುವುದು, ಪ್ರಮುಖ ನಾಯಕರ ಹತ್ಯೆ ಮಾಡುವುದು ಮತ್ತು ನಿಷೇಧಿತ ಐಸಿಸ್ ಸಂಘಟನೆಯ ರಾಷ್ಟ್ರವಿರೋಧಿ ಕಾರ್ಯಸೂಚಿಯನ್ನು ಹರಡುವ ಬಗ್ಗೆ ಗಂಭೀರ ಪಿತೂರಿ ನಡೆಸಲಾಗಿತ್ತು.
ಐಸಿಸ್ ಚಟುವಟಿಕೆಗಳನ್ನು ವಿಸ್ತರಿಸಲು ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಖರೀದಿಸಲು ಸಂಚು ರೂಪಿಸಲಾಗಿತ್ತು. ಪ್ರಮುಖ ಆರೋಪಿ ಪಾಷಾ, ಹನೀಫ್‌ಗೆ ಹಿಂಸಾತ್ಮಕ ಕೃತ್ಯಗಳಿಗಾಗಿ ಎರಡು ಪಿಸ್ತೂಲ್ ಹಾಗೂ 60 ಜೀವಂತ ಗುಂಡುಗಳನ್ನು ನೀಡಿದ್ದ. ಅಷ್ಟೇ ಅಲ್ಲದೆ, ಪಿತೂರಿಯ ಭಾಗವಾಗಿ ಇತರ ಕೆಲವು ಆರೋಪಿಗಳನ್ನು ಬೆಂಗಳೂರಿನಿಂದ ಬಾಡಿಗೆ ಕಾರಿನಲ್ಲಿ ಪಶ್ಚಿಮ ಬಂಗಾಳಕ್ಕೆ ತಲುಪಿಸಿ ತಲೆಮರೆಸಿಕೊಳ್ಳಲು ಹನೀಫ್ ನೆರವಾಗಿದ್ದ ಎಂದು ಎನ್‌ಐಎ ಬಯಲಿಗೆಳೆದಿದೆ.
ಬೆಂಗಳೂರು ಪೊಲೀಸರಿಂದ ಎನ್‌ಐಎ ಹೆಗಲಿಗೆ;
ದಕ್ಷಿಣ ಭಾರತ ತಲ್ಲಣಗೊಳಿಸಲು ಸಿದ್ಧವಾಗಿದ್ದ ಈ ಅಲ್ ಹಿಂದ್ ಐಸಿಸ್ ಜಾಲದ ವಿರುದ್ಧ 2020ರ ಜನವರಿ 10ರಂದು ಬೆಂಗಳೂರು ಪೊಲೀಸರು ಮೊದಲ ಬಾರಿಗೆ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಗಾಂಭೀರ್ಯತೆಯನ್ನು ಪರಿಗಣಿಸಿ, ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವಹಿಸಲಾಗಿತ್ತು. ಇದೀಗ ಸುದೀರ್ಘ ತನಿಖೆಯ ಬಳಿಕ ಎನ್‌ಐಎ ಕೋರ್ಟ್ ಮೊದಲ ಆರೋಪಿಗೆ ಶಿಕ್ಷೆ ಪ್ರಕಟಿಸಿದೆ.