ಫೇಸ್‌ಬುಕ್ ನಲ್ಲಿ ಪರಿಚಯವಾದ ಗೆಳೆತನ ಗಾಢ ಪ್ರೀತಿಗೆ ತಿರುಗಿ ಬರೋಬ್ಬರಿ ಏಳು ವರ್ಷಗಳ ಕಾಲ ಹೋರಾಡಿದ ಪ್ರೇಮಿಗಳು ಕೊನೆಗೂ ಕಟ್ಟುಪಾಡುಗಳ ಗೋಡೆಯನ್ನು ಒಡೆದು ಒಂದಾಗಿದ್ದಾರೆ. ತಮಿಳುನಾಡಿನ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ತೃತೀಯಲಿಂಗಿ (ಟ್ರಾನ್ಸ್‌ಜೆಂಡರ್) ಯುವತಿಯನ್ನು ಮದುವೆಯಾಗುವ ಮೂಲಕ ತಮ್ಮ ಸುದೀರ್ಘ ಪ್ರೇಮ ಪಯಣವನ್ನು ಸುಖಾಂತ್ಯಗೊಳಿಸಿದ್ದಾರೆ.
ತಿರುವಳ್ಳೂರು ಜಿಲ್ಲೆಯ ಆವಡಿ ಮೂಲದ 25 ವರ್ಷದ ಬಿ. ಪ್ರವೀಣ್ ರಾಜ್ ಎಂಬ ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ನಾಮಕ್ಕಲ್ ಮೂಲದ 27 ವರ್ಷದ ತೃತೀಯಲಿಂಗಿ ಕವಿಜಾ ಎಂಬುವವರು ಕಳೆದ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದರು. ಫೇಸ್‌ಬುಕ್‌ನಲ್ಲಿ ಆದ ಪರಿಚಯ ಕಾಲಕ್ರಮೇಣ ಗಾಢ ಪ್ರೀತಿಯಾಗಿ ಬದಲಾಗಿತ್ತು. ಮೂರು ವರ್ಷಗಳ ಪ್ರೀತಿಯ ನಂತರ ಇಬ್ಬರೂ ತಿರುಚಂದೂರ್ ದೇವಾಲಯದಲ್ಲಿ ಮದುವೆಯಾಗಿದ್ದರು.
ಆದರೆ, ಈ ಮದುವೆಯನ್ನು ಪ್ರವೀಣ್ ಅವರ ಕುಟುಂಬಸ್ಥರು ಒಪ್ಪಿಕೊಳ್ಳಲಿಲ್ಲ. ಪ್ರವೀಣ್ ಅವರನ್ನು ಬಲವಂತವಾಗಿ ಮನೆಗೆ ಕರೆದೊಯ್ದು, ಸುಮಾರು ಎರಡು ವರ್ಷಗಳ ಕಾಲ ಕವಿಜಾ ಅವರನ್ನು ಭೇಟಿಯಾಗದಂತೆ ಮನೆ ಬಂಧನದಲ್ಲಿಟ್ಟಿದ್ದರು. ಅಲ್ಲದೆ, ಕಳೆದ ಮೇ ತಿಂಗಳಲ್ಲಿ ಪ್ರವೀಣ್ ಅವರಿಗೆ ಬೇರೊಬ್ಬ ಯುವತಿಯೊಂದಿಗೆ ಬಲವಂತವಾಗಿ ಮದುವೆ ಮಾಡಲು ಕುಟುಂಬಸ್ಥರು ಸಜ್ಜಾಗಿದ್ದರು. ಇದನ್ನು ವಿರೋಧಿಸಿ
ಹೊರಬಂದ ಪ್ರವೀಣ್, ತಕ್ಷಣವೇ ತಮ್ಮ ಪ್ರೇಯಸಿ ಕವಿಜಾ ಅವರನ್ನು ಭೇಟಿಯಾದರು. ಬಳಿಕ ಈರೋಡ್ ಜಿಲ್ಲೆಯ ಗೋಪಿಶೆಟ್ಟಿಪಾಳ್ಯಂನ ‘ಲಾ ಫೋರಂ’ ಹಾಗೂ ಲೀಗಲ್ ಏಡ್ ಸೆಂಟರ್ ಮೆಟ್ಟಿಲೇರಿ, ಆಪ್ತರ ಸಮ್ಮುಖದಲ್ಲಿ ಕಾನೂನುಬದ್ಧವಾಗಿ ಮದುವೆಯಾಗಿದ್ದಾರೆ. ಈ ಮೂಲಕ ತೃತೀಯಲಿಂಗಿಗಳಿಗೂ ಸಂವಿಧಾನದಲ್ಲಿ ಹಕ್ಕುಗಳಿವೆ ಮತ್ತು ಸಮಾಜದಲ್ಲಿ ಮದುವೆಯಾಗಿ ಗೌರವಯುತವಾಗಿ ಬಾಳುವ ಅಧಿಕಾರವಿದೆ” ಎಂದು ಈ ನವದಂಪತಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ.