ಬೆಂಗಳೂರು: ಕೌಟುಂಬಿಕವಾಗಿ ಗಂಡ – ಹೆಂಡತಿ ನಡುವೆ ನಡೆಯುವ ಜಗಳವು ಅಪರಾಧ ಕೃತ್ಯವಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ದಂಪತಿ ನಡುನಿನ ಜಗಳವು ಭಾರತೀಯ ದಂಡ ಸಂಹಿತೆ ಸೆಕ್ಷನ್498 ಅಡಿ ಕ್ರೌರ್ಯದಂತಹ ಅಪರಾಧ ಕೃತ್ಯವಾಗುವುದಿಲ್ಲ ಕ್ರೌರ್ಯ ಎಂದರೆ ಉದ್ದೇಶ ಪೂರ್ವಕ ಕೃತ್ಯವಾಗಿದ್ದು, ಆತ್ಮಹತ್ಯೆಗೆ ಅಥವಾ ಜೀವಕ್ಕೆ ಅಪಾಯ ತಂದು ಕೊಳಲು ವಿವಾಹಿತ ಮಹಿಳೆಯನ್ನು ಪ್ರಚೋದಿಸರಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಪತ್ನಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ದೋಷಿಯಾಗಿ ಪರಿಗಣಿಸಿ ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಮಡಿಕೇರಿ ತಾಲೂಕಿನ ಮತ್ತು ಮುರ್ನಾಡ್ ಗ್ರಾಮದ ನಿವಾಸಿಗಳಾದ ಬಿ.ಎಸ್.ಜನಾರ್ದನ (52), ಮತ್ತು ಆತನ ತಾಯಿ ಉಮಾವತಿ (73) ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಅವರ ಪೀಠ ಈ ಮೇಲಿನಂತೆ ಆದೇಶ ಮಾಡಿದೆ.
ಐಪಿಸಿ ಸೆಕ್ಷನ್ 306 ಅಡಿ ಆತ್ಮಹತ್ಯೆಗೆ ಪ್ರಚೋದಿಸಿದ ಅಪರಾಧವಾಗಬೇಕೆಂದರೆ ಆರೋಪಿಯ ಕೃತ್ಯ ಆತ್ಮಹತ್ಯೆ ಮಾಡಿಕೊಳ್ಳಲು ನೇರವಾಗಿ ಕಾರಣವಾಗಿರಬೇಕು. ಆತ್ಮಹತ್ಯೆಗೆ ಪ್ರಚೋದಿಸಲು ಆರೋಪಿಯ ಕಡೆಯಿಂದ ಸಕಾರಾತ್ಮಕ ಕೃತ್ಯವಿಲ್ಲದಿದ್ದರೆ ಅದು ಕಾನೂನಿನ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಏನಿದು ಪ್ರಕರಣ?: ಸರಸ್ವತಿ ಎಂಬುವರನ್ನು ಜನಾರ್ದನ 1996 ರಲ್ಲಿ ಮದುವೆ ಮಾಡಿಕೊಂಡಿದ್ದರು. 1998 ಆ.4ರಂದು ಸರಸ್ವತಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೇಳೆ ಪೊಲೀಸರಿಗೆ ಹೇಳಿಕೆ ನೀಡಿದ್ದ ಸರಸ್ವತಿ, ಪತಿ ನನ್ನ ಶೀಲ ಶಂಕಿಸಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಪತ್ನಿ ಆರೋಪಿಸಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಸರಸ್ವತಿ ಸಾವನ್ನಪ್ಪಿದ್ದರು.
ನಂತರ ಪೊಲೀಸರು ಸರಸ್ವತಿಯ ಹೇಳಿಕೆಯಂತೆ ಪತಿ ಜನಾರ್ದನ ಮತ್ತು ಅತ್ತೆ ಉಮಾವತಿ ವಿರುದ್ಧ ದೂರು ದಾಖಲಿಸಿ ದೋಷರೋಪ ಪಟ್ಟಿ ಸಲ್ಲಿಸಿದ್ದರು.
ಮಡಿಕೇರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧದಡಿ ಜನಾರ್ದನಗೆ 7 ವರ್ಷ ಜೈಲು ಶಿಕ್ಷೆ, ಅವರ ತಾಯಿಗೆ 4 ವರ್ಷ ಜೈಲು ಶಿಕ್ಷೆ, ತಲಾ 1 ಸಾವಿರ ದಂಡ ವಿಧಿಸಿ ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಜನಾರ್ದನ ಮತ್ತು ಆತನ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ಪೀಠ ಪತ್ನಿ ಶೀಲ ಶಂಕಿಸಿ ಕಿರುಕುಳ ನೀಡಿದ ಆರೋಪ ಜನಾರ್ದನ ಅವರ ಮೇಲಿದೆ. ಸೊಸೆ ಸರಸ್ವತಿ ಮಾಡುತ್ತಿದ್ದ ಮನೆ ಕೆಲಸ ತೃಪ್ತಿಕರವಾಗಿಲ್ಲ ಎಂಬ ಆಕ್ಷೇಪಣೆ ಆರೋಪ ಅತ್ತೆ ಉಮಾಪತಿ ಮೇಲಿದೆ. ಆದರೆ ಮೃತ ಸರಸ್ವತಿಯ ಹತ್ತಿರ ಸಂಬಂಧಿಕರು ಹಾಗೂ ನೆರೆಹೊರೆಯವರು ಹೇಳಿದ ಸಾಕ್ಷ್ಯದ ಪ್ರಕಾರ ಸರಸ್ವತಿಗೆ ಪತಿ ಜನಾರ್ದನ ಯಾವುದೇ ರೀತಿಯ ಕಿರುಕುಳ ನೀಡುತ್ತಿರಲ್ಲಿಲ್ಲ ಪತಿ-ಪತ್ನಿ ನಡುವೆ ಸೌಹಾರ್ದಯುತ ಸಂಬಂಧವಿತ್ತು ಎಂಬುದು ಸಾಬೀತಾಗುತ್ತದೆ. ಆರೋಪಿಗಳು ಮೃತಳಿಗೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದಕ್ಕೆ ಯಾವುದೇ ಸೂಕ್ತ ಸಾಕ್ಷ್ಯವಿಲ್ಲ ಎಂದು ತೀರ್ಮಾನಿಸಿ ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋಟ್೯ ರದ್ದು ಪಡಿಸಿದೆ.