ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ)ಯ ಸೆಕ್ಷನ್ 319 ರ ಅಡಿಯಲ್ಲಿ ಅಧಿಕಾರ ಚಲಾಯಿಸುವ ಮೂಲಕ ಪ್ರಕರಣದಲ್ಲಿ ಹೆಚ್ಚುವರಿ ಆರೋಪಿ ಸೇರಿಸಿಕೊಳ್ಳಲು ವಿಚಾರಣಾ ನ್ಯಾಯಾಲಯ ಆರೋಪಿಯ ವಿರುದ್ಧ ಬಲವಾದ ಸಾಕ್ಷ್ಯಗಳಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಲ್ಲದೇ, ಹಾಗೊಂದು ವೇಳೆ ಪ್ರಕರಣದಲ್ಲಿ ಹೆಚ್ಚುವರಿಯಾಗಿ ಆರೋಪಿಯನ್ನು ಸೇರಿಸಿಕೊಂಡಾಗ ಆತನ ವಿರುದ್ಧದ ಸಾಕ್ಷ್ಯಾಧಾರಗಳು ಅಲ್ಲಗಳೆಯದೇ ಇದ್ದಲ್ಲಿ ಆರೋಪಿಗೆ ಶಿಕ್ಷೆಯಾಗುವಂತೆ ಇರಬೇಕು. ಹೀಗಾಗಿ ವಿಚಾರಣಾ ನ್ಯಾಯಾಲಯಗಳು ಸಿಆರ್ಪಿಸಿ ಸೆಕ್ಷನ್ 319 ಅಡಿ ಲಭ್ಯವಿರುವ ಅಧಿಕಾರವನ್ನು ಅತ್ಯಂತ ಜಾಗರೂಕತೆಯಿಂದ ನ್ಯಾಯಾಂಗ ವಿವೇಚನೆ ಬಳಸಿ ಚಲಾಯಿಸಬೇಕು ಎಂದು ನ್ಯಾಯಮೂರ್ತಿ ಪಿ. ನರಸಿಂಹ ಹಾಗೂ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ, ಸಿಆರ್ಪಿಸಿ ಸೆಕ್ಷನ್ 319(1) “ಯಾವುದೇ ವಿಚಾರಣೆಯ ಸಂದರ್ಭದಲ್ಲಿ, ಅಥವಾ ಅಪರಾಧದ ವಿಚಾರಣೆಯ ಸಂದರ್ಭದಲ್ಲಿ, ಯಾವುದೇ ವ್ಯಕ್ತಿಯು ಆ ಪ್ರಕರಣದಲ್ಲಿ ಆರೋಪಿ ಅಲ್ಲದಿದ್ದೂ ಆತ ಅಪರಾಧವನ್ನು ಮಾಡಿದ್ದಾನೆ ಎಂದು ಸಾಕ್ಷ್ಯಗಳಿಂದ ಕಂಡುಬರುವಂತಿದ್ದರೆ ಅಂತಹ ಆರೋಪಿಯ ವಿರುದ್ಧ ನ್ಯಾಯಾಲಯವು ಆರೋಪ ನಿಗದಿ ಮಾಡಿ ವಿಚಾರಣೆ ಮುಂದುವರೆಸಬಹುದಾಗಿದೆ. ಇಂತಹ ಸಂದರ್ಭದಲ್ಲಿ ಆ ವ್ಯಕ್ತಿಯು ಅಪರಾಧದಲ್ಲಿ ಭಾಗಿಯಾಗಿರುವ ಸಂಭವನೀಯತೆಗಿಂತ, ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂಬುದಕ್ಕೆ ಬಲವಾದ ಮತ್ತು ವಿಶ್ವಾಸಾರ್ಹನೀಯ ಪುರಾವೆಗಳು ಇರಬೇಕಾಗುತ್ತದೆ ಎಂದು ವಿವರಿಸಿದೆ.
ಅಂತಿಮವಾಗಿ ಪ್ರತ್ಯಕ್ಷ ಸಾಕ್ಷಿಯಲ್ಲದ ಸಾಕ್ಷಿದಾರ (ಪಿಡಬ್ಲ್ಯೂ-1) ನೀಡಿದ್ದ ಹೇಳಿಕೆ ಆಧರಿಸಿ, ಮೇಲ್ಮನವಿದಾರರನ್ನು ಆರೋಪಿಯಾಗಿಸಿ ವಿಚಾರಣೆ ನಡೆಸಲು ಸಮನ್ಸ್ ಜಾರಿ ಮಾಡಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಮತ್ತು ಇದನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್ ನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ವಿಚಾರಣಾ ನ್ಯಾಯಾಲಯ ತನ್ನಲ್ಲಿ ಸಾಕ್ಷಿದಾರರ ನೀಡಿದ ಹೇಳಿಕೆ ಅನುಸರಿಸಿ ಶಂಕರ್ ಹಾಗೂ ವಿಶಾಲ್ ಸಿಂಗ್ ಎಬುವರಿಗೆ ಸಮನ್ಸ್ ಜಾರಿ ಮಾಡಿತ್ತು.
ವಿಚಾರಣಾ ನ್ಯಾಯಾಲಯದ ಸಮನ್ಸ್ ಪ್ರಶ್ನಿಸಿ ಮೇಲ್ಮನವಿದಾರರು ಮೊದಲಿಗೆ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಅರ್ಜಿ ವಜಾಗೊಳಿಸಿದ ನಂತರ ಸುಪ್ರೀಂ ಮೊರೆ ಹೋಗಿದ್ದರು.
(CRIMINAL APPEAL NO. 2367 OF 2024)
ಮೂಲ: LAW TIME