ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದ್ದು, ವಿವಾಹಿತ ಮಹಿಳೆಯರು ವೈಯಕ್ತಿಕ ದ್ವೇಷಕ್ಕಾಗಿ ಪತಿ ಮತ್ತು ಪತಿಯ ಕುಟುಂಬದವರಿಗೆ ಕಿರುಕುಳ ನೀಡಲು ವರದಕ್ಷಿಣೆ ಕಿರುಕುಳ ತಡೆ ಕಾಯ್ದೆಯಂಥ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ನ್ಯಾಯಾಲಯಗಳು ಇಂಥ ಪ್ರಕರಣಗಳನ್ನು ಇತ್ಯಾರ್ಥ ಪಡಿಸುವ ಮುನ್ನ ಕೂಲಂಕುಷವಾಗಿ ಪರಿಶೀಲಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಪತ್ನಿ ನನ್ನ ವಿರುದ್ಧ ವರದಕ್ಷಿಣೆ ಕಿರುಕುಳ ಸುಳ್ಳು ಕೇಸ್ ದಾಖಲಿಸಿದ್ದಳು ಎಂದು ಬೇಸತ್ತು ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು.ಈ ಪ್ರಕರಣದ ನಡುವೆಯೇ ತೆಲಂಗಾಣದ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿ ಮೇಲಿನಂತೆ ಹೇಳಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಎನ್.ಕೋಟೇಶ್ವರ ಸಿಂಗ್ ಅವರ ನ್ಯಾಯಪೀಠ, ತೆಲಂಗಾಣ ಹೈಕೋರ್ಟ್ ಆದೇಶವನ್ನು ರದ್ದು ಮಾಡಿದೆ ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣಗಳ ದುರ್ಬಳಕೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ಇತ್ತೀಚಿನ ವರ್ಷಗಳಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ವಿವಾಹಿತ ಮಹಿಳೆಯರು ಸ್ವಾರ್ಥಕ್ಕಾಗಿ ಪತಿ ಮತ್ತು ಪತಿಯ ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳ ತಡೆ ಕಾಯ್ದೆಯಂಥ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಸುಖಾಸುಮ್ಮನೆ ಗಂಡನ ಮನೆಯವರ ಮೇಲೆ ಕಿರುಕುಳ ಆರೋಪ ಮಾಡುವ ನಿದರ್ಶನಗಳಿವೆ. ಇಂಥ ಪ್ರಕರಣಗಳನ್ನು ಕೋಟ್೯ ಕೂಲಂಕುಷವಾಗಿ ಪರಿಶೀಲಿಸಿದೆ ಹೋದರೆ ಕಾನೂನು ದುರುಪಯೋಗಕ್ಕೆ ಕಾರಣವಾಗುತ್ತದೆ ಎಂದು ನ್ಯಾ.ಬಿ.ವಿ.ನಾಗರತ್ನ ಅಭಿಪ್ರಾಯಪಟ್ಟಿದ್ದಾರೆ.
ಏನಿದು ಪ್ರಕರಣ?: ಪತ್ನಿಯು ತನ್ನ ಗಂಡ ಹಾಗೂ ಗಂಡನ ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಳು. ಈ ಪ್ರಕರಣವನ್ನು ವಜಾಗೊಳಿಸಲು ತೆಲಂಗಣ ಹೈಕೋರ್ಟ್ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಪತಿಯ ಕಡೆಯವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.