ಬೆಂಗಳೂರು: ವೈದ್ಯರ ನಿರ್ಲಕ್ಷ್ಯದಿಂದ ನಮ್ಮ ತಂದೆ ಸಾವನ್ನಪ್ಪಿದ್ದು ಇದರ ತನಿಖೆಗೆ ನಿರ್ದೇಶಿಸಬೇಕು ಎಂದು ಮಗ ನೀಡಿರುವ ದೂರನ್ನು ಹೈಕೋರ್ಟ್ ಮಾನ್ಯ ಮಾಡಿದ್ದು ತನಿಖೆಗೆ ಆದೇಶಿಸಿದೆ.
ವೈದ್ಯರ ನಿರ್ಲಕ್ಷ್ಯದಿಂದ ತಂದೆಯನ್ನು ಕಳೆದುಕೊಂಡಿರುವ ಮಗನ ನ್ಯಾಯಬದ್ಧ ಗೋಳನ್ನು ಆಲಿಸದೇ ಹೋದರೆ ಗತಿಯೇನು ಎಂದು ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಮಗ ನೀಡಿರುವ ದೂರಿನ ಬಗ್ಗೆ ನ್ಯಾಯಯುತ ತನಿಖೆಯ ಅಗತ್ಯವಿದೆ ಹೈಕೋರ್ಟ್ ಹೇಳಿದೆ.
ನನ್ನ ತಂದೆ ಚಿಕಿತ್ಸೆ ಸಮಯದಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ. ಈ ಕುರಿತಾದ ದೂರಿನ ತನಿಖೆಗೆ ನಿರ್ದೇಶಿಸಬೇಕು’ ಎಂದು ಕೋರಿ ನಾಗರಬಾವಿಯ ವಿಕಾಸ್ ಎಂ.ದೇವ್ (31) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
ಎಂ.ಮಹದೇವ (65) ಅವರು ಕಳೆದ ವರ್ಷ ನಗರದ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ನಂತರ ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವಿಗೀಡಾಗಿದ್ದಾರೆ ಎಂಬ ದೂರಿನ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿ ಎಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ಗೆ ನ್ಯಾಯಪೀಠ ನಿರ್ದೇಶಿಸಿದೆ.