ನವದೆಹಲಿ: ಕೇಂದ್ರ ಸಾರಿಗೆ ಸಚಿವಾಲಯ ಮೋಟಾರು ವಾಹನ ಕಾಯ್ದೆ 1988ರ ಅಡಿಯ ಮೋಟಾರ್ ವಾಹನಗಳ ಅಗ್ರಿಗೇಟರ್ ಮಾರ್ಗಸೂಚಿ 2025 ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರಗಳು ಖಾಸಗಿ ಬೈಕುಗಳನ್ನು ಪ್ರಯಾಣಿಕರ ಸಂಚಾರಕ್ಕೆ ಬಳಸಲು ಅಗ್ರಿಗೇಟರುಗಳಿಗೆ ಅನುಮತಿ ಕೊಡಬಹುದು ಎಂದು ಹೇಳಿದೆ.
ರಾಪಿಡೊ, ಉಬರ್ ಮತ್ತು ಓಲಾದಂತಹ ಬೈಕ್ ಟ್ಯಾಕ್ಸಿ ಪ್ಲಾಟ್‌ಫಾರ್ಮ್‌ಗಳಿಗೆ ಪರಿಹಾರವಾಗಿ, ಜುಲೈ 1 ರಂದು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರನ್ವಯ ಪ್ರಯಾಣಿಕರ ಸೇವೆಗೆ ಖಾಸಗಿ ಬೈಕ್ ಗಳ ಬಳಕೆಗೆ ಅನುಮತಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಆದರೆ ಇದಕ್ಕೆ ಆಯಾ ರಾಜ್ಯ ಸರ್ಕಾರಗಳ ಅನುಮತಿ ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಕುರಿತು ಅದು ಮಂಗಳವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದ್ದು ಇದೇ ಮೊದಲು ಎಂಬುದು ಗಮನಾರ್ಹ.
ಮಾರ್ಗಸೂಚಿಯಲ್ಲೇನಿದೆ?: ‘ರಾಜ್ಯ ಸರ್ಕಾರಗಳು ಖಾಸಗಿ ಬೈಕ್‌ಗಳನ್ನು ಪ್ರಯಾಣಿಕರ ಸಂಚಾರಕ್ಕೆ ಬಳಸಲು ಅಗ್ರಿಗೇಟರ್‌ಗಳಿಗೆ ಅನುಮತಿ ಕೊಡಬಹುದು. ಇದರಿಂದ ಸಂಚಾರ ದಟ್ಟಣೆ. ಮಾಲಿನ್ಯ ನಿಯಂತ್ರಣ. ಕೈಗೆಟುಕುವ ದರದ ಪ್ರಯಾಣ, ಸ್ಥಳೀಯ ಸಾರಿಗೆ ಅಭಿವೃದ್ಧಿ ಮತ್ತು ಜೀವನವನ್ನು ರೂಪಿಸುವ ಅವಕಾಶ ಮಾಡಿಕೊಡಬಹುದಾಗಿದೆ ಎಂದು ಹೇಳಿದೆ.
ರಾಜ್ಯ ಸರ್ಕಾರಗಳು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 67ರ ಸಬ್ ಸೆಕ್ಷನ್ (3)ರ ಅಡಿಯಲ್ಲಿ ಅಗ್ರಿಗೇಟರ್ ಗಳಿಗೆ ಖಾಸಗಿ ವಾಹನಗಳನ್ನು ಪ್ರಯಾಣಿಕರ ಸಂಚಾರಕ್ಕೆ ಬಳಸಲು ಅನುಮತಿ ಕೊಡಬಹುದು.
ಆಗ್ರಿಗೇಟರ್‌ಗಳಿಗೆ ದೈನಂದಿನ, ವಾರದ, ಹದಿನೈದು ದಿನದ ಅನುಮತಿಗಾಗಿ ಸರ್ಕಾರ ಶುಲ್ಕ ವಿಧಿಸಬಹುದು ಎಂದು ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.