ಬೆಂಗಳೂರು: ಐಪಿಎಲ್ ವಿಜಯೋತ್ಸವದ ವೇಳೆ
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಉಂಟಾಗಿದ್ದ ಕಾಲ್ತುಳಿತ ಪ್ರಕರಣ ಸಂಬಂಧ ಬೆಂಗಳೂರು ನಗರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ (ಸಿಎಟಿ) ರದ್ದುಪಡಿಸಿದೆ.
ಕೂಡಲೇ ವಿಕಾಸ್ ಕುಮಾರ್ ಅವರನ್ನು ಸೇವೆಗೆ ಮರು ನೇಮಕ ಮಾಡಬೇಕು. ಅಮಾನತು ಅವಧಿಯನ್ನು ಕರ್ತವ್ಯವೆಂದು ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ ನಿರ್ದೇಶಿಸಿದೆ. ಇದೇ ಪ್ರಕರಣ ಸಂಬಂಧ ಸೇವೆಯಿಂದ ಅಮಾನತುಗೊಂಡಿರುವ ಇತರೆ ಹಿರಿಯ ಐಪಿಎಸ್ ಮತ್ತು ಇತರೆ ಪೊಲೀಸರಿಗೂ ಈ ರಾಜ್ಯ ಸರ್ಕಾರ ಈ ಆದೇಶದ ಪ್ರಯೋಜನ ನೀಡಲಿದೆ ಎಂಬ ವಿಶ್ವಾಸ ಹೊಂದಿರುವುದಾಗಿ ಪೀಠ ತಿಳಿಸಿದೆ.
ಅಮಾನತು ಆದೇಶ ರದ್ದು ಕೋರಿ ವಿಕಾಸ್ ಕುಮಾರ್ ಸಲ್ಲಿಸಿದ್ದ ತಕರಾರು ಅರ್ಜಿ ಪುರಸ್ಕರಿಸಿದ ಸಿಎಟಿಯ ನ್ಯಾಯಾಂಗ ಸದಸ್ಯರಾದ ನ್ಯಾ.ಬಿ.ಕೆ. ಶ್ರೀವಾತ್ಸವ ಮತ್ತು ಆಡಳಿತಾತ್ಮಕ ಸದಸ್ಯ ಸಂತೋಷ್ ಮೆಹ್ರಾರ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಕಾಲ್ತುಳಿತ ಘಟನೆಗೆ ಪೊಲೀಸರ ಕರ್ತವ್ಯ ಲೋಪವೇ ಕಾರಣ ಎಂಬ ರಾಜ್ಯ ಸರ್ಕಾರದ ವಾದವನ್ನು ಸಿಎಟಿ ತಳ್ಳಿಹಾಕಿರುವ ನ್ಯಾಯಾಧಿಕರಣ, ಈ ಪ್ರಕರಣಕ್ಕೆ ಆರ್ ಸಿಬಿ ಹೊಣೆ ಎಂದು ಸ್ಪಷ್ಟವಾಗಿ ಹೇಳಿದೆ.