ನವದೆಹಲಿ: ಪ್ರತಿಯೊಬ್ಬರು ಉಚಿತವಾಗಿ ಕಾನೂನು ನೆರವನ್ನು ಪಡೆಯುವುದು ಮೂಲಭೂತ ಹಕ್ಕು. ಬಡವರು ಎಂಬ ಕಾರಣಕ್ಕೆ, ಅವರಿಗೆ ಒದಗಿಸುವ ಕಾನೂನು ನೆರವು ಕಡಿಮೆ ಗುಣಮಟ್ಟದ್ದಾಗಿ ಇರಕೂಡದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಅಂಶವನ್ನು ಸಂವಿಧಾನದ 21ನೇ ವಿಧಿಯಡಿ ಗುರುತಿಸಬಹುದು ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರು ಇದ್ದ ನ್ಯಾಯಪೀಠ ಹೇಳಿದೆ.
ವಿಚಾರಣಾ ಕೈದಿಗಳು ಅಥವಾ ಅಪರಾಧಿಗಳು ಇರಲಿ ಎಲ್ಲ ಕೈದಿಗಳಿಗೆ ಉಚಿತ ಕಾನೂನು ನೆರವು ಸಿಗುವಂತಾಗಬೇಕು ಎಂದ ನ್ಯಾಯಪೀಠ, ಈ ಕುರಿತು ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯ್ದೆ-1987ರಡಿ ಹಲವು ನಿರ್ದೇಶನಗಳನ್ನು ನೀಡಿದೆ.
ಸಾಮಾಜಿಕ ಕಾರ್ಯಕರ್ತ ಸುಹಾಸ್ ಚಕ್ಕಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ವೇಳೆ, ನ್ಯಾಯಪೀಠ ಮೇಲಿನಂತೆ ಹೇಳಿದೆ.