ಮೈಸೂರು: ಮುಡಾ ಸೈಟು ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣದ ಕಾರಣದಿಂದ ಕಳೆದ ಒಂದೂವರೆ ವರ್ಷಗಳಿಂದ ಹೊಸ ಬಡಾವಣೆ ನಿರ್ಮಾಣಕ್ಕೆ ಅವಕಾಶ ಸಿಗದೆ ಕಂಗಾಲಾಗಿದ್ದ ಬಿಲ್ಡರ್‌ಗಳಿಗೆ ಮುಡಾ ಸಾಮಾನ್ಯ ಸಭೆ ಸಿಹಿ ಸುದ್ದಿ ನೀಡಿದೆ. 300 ಹೊಸ ಖಾಸಗಿ ಬಡಾವಣೆಗಳ ನಿರ್ಮಾಣಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದನೆ ನೀಡಿದೆ.
ಶನಿವಾರ ಬೆಳಗ್ಗೆ ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮುಡಾ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. 300 ಬಡಾವಣೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿರುವುದರಿಂದ ಸಾವಿರಾರು ಮಂದಿ ನಿವೇಶನಾಕಾಂಕ್ಷಿಗಳಿಗೆ ಸೂರು ಸಿಗಲಿದೆ.
ಮುಡಾ ಪ್ರಕರಣದ ಬಳಿಕ ಎರಡನೇ ಬಾರಿಗೆ ನಡೆಯುತ್ತಿರುವ ಸಭೆಯಲ್ಲಿ ಮುಡಾ ಸಂಬಂಧ 344 ವಿಷಯಗಳಿಗೆ ಒಪ್ಪಿಗೆ ನೀಡಲಾಗಿದ್ದು, ಇದರಲ್ಲಿ ಹೊಸದಾಗಿ ಬಡಾವಣೆ ನಿರ್ಮಿಸುವ ವಿಚಾರವಾಗಿ ಖಾಸಗಿ ಬಿಲ್ಡರ್‌ಗಳು ಮತ್ತು ಗೃಹ ನಿರ್ಮಾಣ ಸಹಕಾರ ಸಂಘಗಳಿಂದ ಸಲ್ಲಿಕೆಯಾಗಿದ್ದ 300 ಖಾಸಗಿ ಬಡಾವಣೆಗಳ ನಿರ್ಮಾಣ ನಕ್ಷೆಗೆ ಅನುಮೋದನೆ ನೀಡುವ ಮೂಲಕ ಹೊಸ ಲೇಔಟ್ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ.