ಬೆಂಗಳೂರು: ಕ್ರಿಮಿನಲ್ ಪ್ರಕರಣಗಳ ತನಿಖೆಯಲ್ಲಿ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪವೆಸಗಿದ ಆರೋಪದಲ್ಲಿ ರಾಮಮೂರ್ತಿ ನಗರ ಠಾಣೆ ಇನ್ಸ್‌ಪೆಕ್ಟರ್ ಸೇರಿದಂತೆ ಆರು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ.
ಇನ್ಸ್‌ಪೆಕ್ಟರ್ ಮುತ್ತುರಾಜ್, ಸಬ್ ಇನ್ಸ್‌ಪೆಕ್ಟರ್ ಉಮೇಶ್, ಸಹಾಯಕ ಸಬ್ ಇನ್‌ಸ್ಪೆಕ್ಟರ್‌ಗಳಾದ ಫೈರೋಜ್ ಖಾನ್, ಮಹೇಶ್, ಹೆಡ್ ಕಾನ್‌ಸ್ಟೇಬಲ್ ಮಂಜುನಾಥ್ ಹಾಗೂ ಕಾನ್‌ಸ್ಟೇಬಲ್ ಬಸವರಾಜು ಆಳ್ಳೋಳ್ಳಿ ಅಮಾನತುಗೊಂಡಿದ್ದಾರೆ. ಎಸಿಪಿ ವರದಿ ಆಧರಿಸಿ ಈ ಆರು ಮಂದಿ ಪೊಲೀಸರನ್ನು ನಗರ ಪೊಲೀಸ್ ಹೆಚ್ಚುವರಿ ಆಯುಕ್ತ ಎನ್.ಸತೀಶ್ ಕುಮಾರ್ ಅಮಾನತು ಮಾಡಿ ಆದೇಶಿಸಿದ್ದಾರೆ.
ಕೆಲದಿನಗಳ ಹಿಂದೆ ರಾಮಮೂರ್ತಿನಗರವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳ ಕುರಿತು ನಗರ ಹೆಚ್ಚುವರಿ ಆಯುಕ್ತರಿಗೆ ದೂರುಗಳು ಸಲ್ಲಿಕೆಯಾಗಿದ್ದವು. ಇವುಗಳನ್ನು ಗಂಭೀರವಾಗಿ ಪರಿಗಣಿಸಿದ ಸತೀಶ್ ಕುಮಾರ್ ಅವರು ಈ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಕೆ.ಜಿ.ಹಳ್ಳಿ ಉಪ ವಿಭಾಗದ ಎಸಿಪಿಗೆ ಸೂಚಿಸಿದ್ದರು.
ಈ ದೂರುಗಳ ಸಂಬಂಧ ಇಲಾಖಾ ಮಟ್ದದ ಆಂತರಿಕ ವಿಚಾರಣೆ ನಡೆಸಿ ಎಸಿಪಿ ವರದಿ ಸಲ್ಲಿಸಿದ್ದರು. ವರದಿಯಲ್ಲಿ ಇನ್ಸ್‌ಪೆಕ್ಟರ್ ಮುತ್ತುರಾಜ್, ಉಮೇಶ್ ಹಾಗೂ ಇತರೆ ಸಿಬ್ಬಂದಿ ಕರ್ತವ್ಯಲೋಪ ಎಸಗಿರುವುದು ಸಾಬೀತಾಗಿತ್ತು ಎನ್ನಲಾಗಿದೆ.
ಇತ್ತೀಚೆಗೆ ಬಾರ್ ಆ್ಯಂಡ್ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಕೆಲ ರೌಡಿಗಳು ಹಲ್ಲೆ ನಡೆಸಿದ್ದರು. ಈ ಸಂಬಂಧ ಗಸ್ತು ಸಿಬ್ಬಂದಿ ದೂರು ನೀಡಿದರೂ ಕಾನೂನು ಕ್ರಮ ಜರುಗಿಸದ ಇನ್ಸ್‌ಪೆಕ್ಟರ್ ಮುತ್ತುರಾಜ್,ಎಸ್ಐ ಉಮೇಶ್ ನಿರ್ಲಕ್ಷ್ಯ ವಹಿಸಿದ್ದ ಆರೋಪ ಇತ್ತು. ಜೊತೆಗೆ ಕೊಲೆ ಪ್ರಕರಣದಲ್ಲಿ 5 ನೇ ಆರೋಪಿಯನ್ನು ದೋಷ ರೋಪ ಪಟ್ಟಿಯಿಂದ ಕೈಬಿಡಲಾಗಿತ್ತು. ಹಾಗೂ ಡ್ರಗ್ಸ್ ಮಾರಾಟ ಯತ್ನ ಪ್ರಕರಣದಲ್ಲಿ ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸದೆ ಬಿಟ್ಟು ಕಳುಹಿಸಲಾಗಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು.