ಬೆಂಗಳೂರು:ಸಹ ಪಾಲುದಾರಿಕೆ ಹೊಂದಿರುವ ಕಂಪನಿಯ ಉದ್ಯೋಗಿಗಳ ಇಪಿಎಫ್ ಹಣ ವಂಚಿಸಿದ ಆರೋಪದ ಮೇಲೆ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧ ಅರೆಸ್ಟ್ ವಾರಂಟ್ ಜಾರಿಗೊಳಿಸಲಾಗಿದೆ. ಇದೇ ತಿಂಗಳು 4ರಂದು ಅರೆಸ್ಟ್ ವಾರಂಟ್ ಜಾರಿಯಾಗಿದೆ.
ರಾಬಿನ್ ಉತ್ತಪ್ಪ ಅವರು ಪುಲಕೇಶಿ ನಗರ ಠಾಣೆ ವ್ಯಾಪ್ತಿಯ ನಿವಾಸಿ ಆಗಿರುವುದರಿಂದ ಅವರನ್ನು ಬಂಧಿಸುವಂತೆ ಇಪಿಎಫ್ ರಿಜಿನಲ್ ಕಮಿಷನರ್ ಷಡಾಕ್ಷರಿ ಗೋಪಾಲ ರೆಡ್ಡಿ ಎಂಬವರು ಪೊಲೀಸರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ರಾಬಿನ್ ಉತ್ತಪ್ಪ ಅವರು ಸೆಂಚುರೀಸ್ ಲೈಫ್-ಸ್ಟೈಲ್ ಬ್ರಾಂಡ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯ ಸಹ ಪಾಲುದಾರರಾಗಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಲವರ ಇಪಿಎಫ್ ಹಣ ಪಾವತಿಸಿಲ್ಲ. ಸಂಬಳದಲ್ಲಿ ಇಪಿಎಫ್ ಹಣ ಕಡಿತಗೊಳಿಸಿಕೊಂಡು, ಉದ್ಯೋಗಿಗಳ ಖಾತೆಗೆ ಹಾಕದೇ ವಂಚಿಸಿರುವ ಆರೋಪ ಕೇಳಿ ಬಂದಿದೆ.