ಬೆಂಗಳೂರು: ಬಿಜೆಪಿ ಮಾಜಿ ಸಚಿವ, ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ನಂದಿನಿ ಲೇಔಟ್ ಪೊಲೀಸರು 150 ಕ್ಕೂ ಹೆಚ್ಚು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಶಾಸಕ ಮುನಿರತ್ನ ಅವರು ನೀಡಿದ ದೂರಿನ ಅನ್ವಯ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು,ದೂರಿನಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್, ಕುಸುಮಾ ಹನುಮಂತರಾಯಪ್ಪ ಹೆಸರುಗಳು ಉಲ್ಲೇಖವಾಗಿವೆ ಎಂದು ತಿಳಿದು ಬಂದಿದೆ. ಇನ್ನೂ ನನ್ನನ್ನು 100 ರಿಂದ 150 ಜನರ ಮೂಲಕ ಕೊಲ್ಲಲು ಕಾಂಗ್ರೆಸ್ ನಾಯಕರು ಸಂಚು ನಡೆಸಿದ್ದಾರೆಂದು ಮುನಿರತ್ನ ದೂರಿನಲ್ಲಿ ಆರೋಪಿಸಿದ್ದಾರೆ ಎನ್ನಲಾಗಿದೆ.
ವಾಜಪೇಯಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂದಿರುಗುವಾಗ ಮುನಿರತ್ನ ಅವರ ತಲೆಯ ಮೇಲೆ ಕಿಡಿಗೇಡಿಗಳು ಮೊಟ್ಟೆ ಎಸೆದಿದ್ದರು. ಈ ಸಂಬಂಧ ಬಂಧನಕ್ಕೊಳಗಾಗಿರುವ ವಿಶ್ವನಾಥ್,ಕೃಷ್ಣಮೂರ್ತಿ ಮತ್ತು ಚಂದ್ರು ಅವರನ್ನು ಗುರುವಾರ ಸ್ಥಳೀಯ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದು ಮೂವರಿಗೆ ಜಾಮೀನು ನೀಡಲಾಗಿದೆ ಎಂದು ತಿಳಿದು ಬಂದಿದೆ.