ಬೆಂಗಳೂರು: ರಜೆ ಪಡೆಯದೆ ಉದ್ಯೋಗಕ್ಕೆ ಗೈರುಹಾಜರಾಗುವುದು ದುರ್ನಡತೆ ಎನ್ನಿಸಿಕೊಳ್ಳುತ್ತದೆ. ಉದ್ಯೋಗಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಅರ್ಹವಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಇದೇ ಕಾರಣಕ್ಕೆ ಉದ್ಯೋಗಿ ವಜಾ ಮಾಡಿದ್ದ ಸಂಸ್ಥೆಯ ನಿಲುವನ್ನು ಎತ್ತಿ ಹಿಡಿದಿದೆ.
ಅಲ್ಲದೇ, ಉದ್ಯೋಗಿಯ ಅನಧಿಕೃತ ರಜೆಯನ್ನು ಕಾರ್ಮಿಕ ನ್ಯಾಯಾಲಯಗಳು ಲಘುವಾಗಿ ಪರಿಗಣಿಸಬಾರದು ಎಂದು ತಿಳಿಸಿರುವ ನ್ಯಾಯಾಲಯ, ಅನಧಿಕೃತವಾಗಿ ಉದ್ಯೋಗಕ್ಕೆ ಗೈರಾದ ಚಾಲಕ ಕಂ.ನಿರ್ವಾಹಕನನ್ನು ಸೇವೆಯಿಂದ ವಜಾಗೊಳಿಸಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಆದೇಶವನ್ನು ಎತ್ತಿಹಿಡಿದಿದೆ.
ಅನಧಿಕೃತವಾಗಿ ಉದ್ಯೋಗಕ್ಕೆ ಗೈರಾದ ಚಾಲಕ ದೇವಪ್ಪ ಎಂಬುವರನ್ನು ಬಿಎಂಟಿಸಿ ವಜಾಗೊಳಿಸಿತ್ತು. ಈ ಕ್ರಮವನ್ನು ಕಾರ್ಮಿಕ ನ್ಯಾಯಾಲಯ ರದ್ದುಪಡಿಸಿತ್ತು. ಕಾರ್ಮಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಿಎಂಟಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠ, ಉದ್ಯೋಗಕ್ಕೆ ಹಾಜರಾಗಬೇಕಾದ ಸಮಯದಲ್ಲಿ ಸಕಾರಣವಿಲ್ಲದೆ ಗೈರಾಗಬಾರದು ಎಂಬ ಹೊಣೆಗಾರಿಕೆ ಉದ್ಯೋಗಿಯ ಮೇಲಿರುತ್ತದೆ. ಔದ್ಯೋಗಿಕ ಕ್ಷೇತ್ರದಲ್ಲಿ ರಜೆ ಮಂಜೂರಾಗದೆ ಗೈರಾಗುವುದು ದುರ್ನಡತೆಯಾಗಲಿದೆ. ಅದು ಶಿಸ್ತು ಕ್ರಮ ಜರುಗಿಸಲು ಅರ್ಹವಾಗಿರುತ್ತದೆ. ರಜೆ ಮಂಜೂರಾಗದೆ ಗೈರಾಗುವುದನ್ನು ಹಕ್ಕು ಎಂಬುದಾಗಿ ಉದ್ಯೋಗಿಗಳು ಪರಿಗಣಿಸಬಾರದು ಎಂದು ತಿಳಿಸಿದೆ.
ಹಾಗೆಯೇ, ಅನಧಿಕೃತವಾಗಿ ಗೈರಾದ ತಪ್ಪಿತಸ್ಥ ಉದ್ಯೋಗಿಯ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು ಸಮರ್ಥನೀಯವಾಗಿದೆ. ಈ ಪ್ರಕರಣದಲ್ಲಿ ರಜೆ ಕೋರಿ ಅರ್ಜಿ ಸಲ್ಲಿಸದೆ ಮತ್ತು ಉನ್ನತಾಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಉದ್ಯೋಗಕ್ಕೆ ಅನಧಿಕೃತವಾಗಿ ಗೈರಾಗಿರುವುದು ಕಾಣುತ್ತದೆ.
ಹೀಗಿದ್ದರೂ ದೇವಪ್ಪನನ್ನು ಸೇವೆಗೆ ಮರು ನಿಯೋಜಿಸಿಕೊಳ್ಳಲು ಕಾರ್ಮಿಕ ನ್ಯಾಯಾಲಯ ಬಿಎಂಟಿಸಿಗೆ ನಿರ್ದೇಶಿಸಿರುವ ಆದೇಶ ದೋಷಪೂರಿತವಾಗಿದೆ. ಉದ್ಯೋಗಿಗಳ ಅನಧಿಕೃತ ಗೈರನ್ನು ಕಾರ್ಮಿಕ ನ್ಯಾಯಾಲಯವು ಲಘುವಾಗಿ ಪರಿಗಣಿಸಬಾರದು ಎಂದು ಹೈಕೋರ್ಟ್ ತೀರ್ಪಿನಲ್ಲಿ
ವಿವರಿಸಿದೆ.
ಪ್ರಕರಣದ ಹಿನ್ನೆಲೆ: ಬಿಎಂಟಿಸಿಯಲ್ಲಿ ಚಾಲಕ ದೇವಪ್ಪ 2017ರ ನ.24ರಿಂದ ರಜೆ ಮಂಜೂರಾಗದಿದ್ದರೂ ಮತ್ತು ಮೇಲಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೇ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರಾಗಿದ್ದರು. ಈ ಕುರಿತು ಡಿಪೊ ವ್ಯವಸ್ಥಾಪಕರು 2017ರ ಡಿಸೆಂಬರ್ 4ರಂದು ವರದಿ ಸಲ್ಲಿಸಿದ್ದರು. 2017ರ ಡಿ.9 ಮತ್ತು 20180 ಏ.13ರಂದು ದೇವಪ್ಪಗೆ ನೋಟಿಸ್ ನೀಡಿದ್ದ ಬಿಎಂಟಿಸಿ, ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿತ್ತು. ಆದರೂ ಕರ್ತವ್ಯಕ್ಕೆ ಹಾಜರಾಗದಕ್ಕೆ ಚಾರ್ಜ್ ಮೆಮೊ ನೀಡಲಾಗಿತ್ತು. ಅದಕ್ಕೂ ದೇವಪ್ಪ ಉತ್ತರಿಸಿರಲಿಲ್ಲ. ಇದರಿಂದ ಬಿಎಂಟಿಸಿ ಶಿಸ್ತು ಪ್ರಾಧಿಕಾರವು ವಿಚಾರಣಾ ಅಧಿಕಾರಿಯನ್ನು ನಿಯೋಜಿಸಿತ್ತು.
( ಮೂಲ- LAW TIME)