ಸುದ್ದಿ

ಸಿ.ಎಂ ಭರವಸೆ: ಸಾರಿಗೆ ಮುಷ್ಕರ ವಾಪಸ್

Share It

ಬೆಂಗಳೂರು: ವೇತನ ಹೆಚ್ಚಳ,ಬಾಕಿ ಹಣ ಬಿಡುಗಡೆಗಾಗಿ ಡಿ.31ರಿಂದ ಅನಿರ್ದಿಷ್ಟ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಭಾನುವಾರ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹಾಗೂ ಸಾರಿಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಂಕ್ರಾಂತಿ ಬಳಿಕ ಬೇಡಿಕೆ ಮತ್ತೊಂದು ಸಭೆ ನಡೆಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಹಾಗಾಗಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರವನ್ನು ಹಿಂಪಡೆದಿದೆ.

2020ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ, 2023ರ ಫೆಬ್ರುವರಿ 28ರವರೆಗೆ ಪರಿಷ್ಕರಣೆಯ ಹಿಂಬಾಕಿ, 2024ರ ಜನವರಿ 1ರಿಂದ ಅನ್ವಯವಾಗುವಂತೆ ಮತ್ತೆ ವೇತನ ಪರಿಷ್ಕರಣೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಡಿ.31ರಿಂದ ಮುಷ್ಕರಕ್ಕೆ ಕರೆ ನೀಡಿತ್ತು.

‘ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಸಾರಿಗೆ ನಿಗಮಗಳ ನಿವೃತ್ತ ನೌಕರರಿಗೆ ನೀಡಬೇಕಿದ್ದ ಬಾಕಿ ಉಪಧನ, ಗಳಿಕೆ ನಗದೀಕರಣ ಮೊತ್ತ ₹ 224 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ. ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ₹ 5,900 ಕೋಟಿ ನಷ್ಟ ಉಂಟಾಗಿತ್ತು. ಅದನ್ನು ತುಂಬಿಸುವ ಕೆಲಸ ಮಾಡುತ್ತಿದ್ದೇವೆ. ಸಂಘಟನೆಗಳೊಂದಿಗೆ ಅನೇಕ ಸಲ ನಾನು ಚರ್ಚೆ ಮಾಡಿದ್ದೆ. ಇಂದು ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ₹ 2000 ಕೋಟಿ ಬಿಡುಗಡೆ ಮಾಡಲು ಮುಖ್ಯಮಂತ್ರಿ ತಯಾರಿದ್ದಾರೆ. ಫೆಬ್ರುವರಿಯಲ್ಲಿ ಮಂಡಿಸುವ ಬಜೆಟ್‌ನಲ್ಲಿ ಬೇಡಿಕೆಗಳನ್ನು ಸೇರಿಸಲಾಗುವುದು. ಸಂಪುಟ ಸಭೆಯಲ್ಲಿ ಚರ್ಚೆಯಾದ ಬಳಿಕ ಹಣ ಬಿಡುಗಡೆಯಾಗಲಿದೆ’ ಎಂದು ರಾಮಲಿಂಗಾರೆಡ್ಡಿ ಸಭೆಯ ಬಳಿಕ ಪ್ರತಿಕ್ರಿಯಿಸಿದ್ದಾರೆ.


Share It

You cannot copy content of this page