ಬೆಂಗಳೂರು: ನಕಲಿ ದಾಖಲೆ ಸಲ್ಲಿಸಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್(ಪಿಎಸ್‌ಐ) ಹುದ್ದೆಗೆ ನೇಮಕಗೊಂಡಿರುವ ಆರೋಪದಡಿ ಬ್ಯಾಡರಹಳ್ಳಿ ಠಾಣೆ ಸಬ್ ಇನ್ಸ್‌ಪೆಕ್ಟರ್ ಕಾಶಿಲಿಂಗೇಗೌಡ ಅವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರ ಪೊಲೀಸ್ ಆಯುಕ್ತರ ಕಚೇರಿ ಅಧಿಕಾರಿ ಎಸ್.ಟಿ. ಚಂದ್ರಶೇಖರ್ ಅವರು ನೀಡಿದ ದೂರಿನ ಮೇರೆಗೆ ಕಾಶಿಲಿಂಗೇಗೌಡ ವಿರುದ್ಧ ವಂಚನೆ, ನಕಲಿ ದಾಖಲೆ ಸೃಷ್ಟಿ, ನಂಬಿಕೆ ದ್ರೋಹ ಸೇರಿ ವಿವಿಧ ಆರೋಪಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸರ್ಕಾರ 2017-18ನೇ ಸಾಲಿನ ಪಿಎಸ್‌ಐ ಹೆದ್ದೆಗಳ ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆಯಲ್ಲಿ ಗರಿಷ್ಠ ವಯೋಮಿತಿ 2018ರ ಮಾ.12ಕ್ಕೆ 30 ವರ್ಷ ಮೀರಿರಬಾರದು ಸೂಚಿಸಿತ್ತು. ಆದರೆ, ಕಾಶಿಲಿಂಗೇಗೌಡರ ಜನ್ಮ ದಿನಾಂಕ 1987 ಏ.15 ಆಗಿದೆ. ಹಾಗಾಗಿ ಗರಿಷ್ಠ ವಯೋಮಿತಿ ಮೀರಿದ್ದು ಪಿಎಸ್ಐ ಹುದ್ದೆಗೆ ಅರ್ಜಿ ಸಲ್ಲಿಸಲು ಅನರ್ಹತೆ ಹೊಂದಿದ್ದಾರೆ. ಆದರೂ ತಮ್ಮ ಜನ್ಮದಿನಾಂಕ 1988 ಏ.15 ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ದಾಖಲೆ ಪರಿಶೀಲನೆ ವೇಳೆ ಅದು ಸಾಬೀತಾಗಿದೆ.