ಬೆಂಗಳೂರು: ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಿಸುವುದಾಗಿ ನಂಬಿಸಿ ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರೂ.ಹಣ ಪಡೆದು ವಂಚಿಸಿರುವ ಆರೋಪದಡಿ ರೈಲ್ವೆ ಇಲಾಖೆ ಉದ್ಯೋಗಿ ಪಟ್ಟೇಗಾರಪಾಳ್ಯದ ನಿವಾಸಿ ಗೋವಿಂದ ರಾಜು(51) ಎಂಬುವವರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ಇತ್ತಿಚೆಗೆ ಉದ್ಯೋಗಾಕಾಂಕ್ಷಿಯೊಬ್ಬರಿಗೆ ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡಿಸುವುದಾಗಿ ಲಕ್ಷಾಂತರ ರೂ.ಹಣ ಪಡೆದು ವಂಚಿಸಿದ್ದ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ಆಧರಿಸಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಗೋವಿಂದ ರಾಜು ಕೆಎಎಸ್, ಎಫ್ ಡಿಎ, ಪೊಲೀಸ್ ಹುದ್ದೆ ಸೇರಿದಂತೆ ವಿವಿಧ ಹುದ್ದೆ ಪಡೆಯಲು ಬೇಕಾಗಿರುವ ಅರ್ಹತಾ ಪರೀಕ್ಷೆಗಳನ್ನು ಪಾಸು ಮಾಡಿಸುವುದಾಗಿ ನಂಬಿಸಿ ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ಬಳಿಕ ವಂಚಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಐದು ವರ್ಷದ ಹಿಂದೆ ಸಿಸಿಬಿ ಪೊಲೀಸರು ವಂಚನೆ ಪ್ರಕರಣದಲ್ಲಿ ಆರೋಪಿ ಗೋವಿಂದ ರಾಜು ಎಂಬಾತನನ್ನು ಬಂಧಿಸಿದ್ದರು. ಈಗ ವಿಜಯನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.