ಬೆಂಗಳೂರು: ಜನಸಂಖ್ಯೆ ಕುಸಿತ ಹಾಗೂ ಸಂಸ್ಕೃತಿಯ ತೀವ್ರ ಹಿನ್ನಡೆಯಂತಹ ಸಮಸ್ಯೆಗಳನ್ನು ಹವ್ಯಕ ಸಮಾಜವು ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಹವ್ಯಕ ಸಂತತಿ ಬೆಳೆಯಲು ಕನಿಷ್ಠ ಮೂರು ಮಕ್ಕಳನ್ನಾದರೂ ಪಡೆಯಬೇಕು. ಮೂರಕ್ಕಿಂತ ಹೆಚ್ಚು ಮಕ್ಕಳಿದ್ದರೆ ನಮ್ಮ ಮಠಕ್ಕೆ ನೀಡಿ, ಆ ಮಕ್ಕಳ ಪಾಲನೆಯ ಜವಾಬ್ದಾರಿಯನ್ನು ಮಠ ನೋಡುಕೊಳ್ಳುತ್ತದೆ ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಅಖಿಲ ಹವ್ಯಕ ಮಹಾಸಭಾ ಇಲ್ಲಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ನಡೆದ ಸಹಸ್ರಚಂದ್ರ ಸಭೆಯಲ್ಲಿ ಸಾನ್ನಿಧ್ಯ ವಹಿಸಿ, ಮಾತನಾಡಿದರು.
ಯುವಕ-ಯುವತಿಯರು ಧರ್ಮಸಮ್ಮತವಲ್ಲದ ವಿಧಾನದಿಂದ ಶರೀರ ಮತ್ತು ಮನಸ್ಸಿನ ಅಪೇಕ್ಷೆ ಪೂರೈಸಿಕೊಳ್ಳುತ್ತಿದ್ದಾರೆ. ಅದಕ್ಕೆ ಆಧುನಿಕ ವಿಜ್ಞಾನ ಸಮ್ಮತಿ ಸೂಚಿಸುತ್ತಿದೆ. ಈ ವಿಜ್ಞಾನವು ಅಧರ್ಮದ ಮಾರ್ಗದಲ್ಲಿ ಸಾಗುವ ದಾರಿ ತೋರಿಸುತ್ತಿದೆ. ಈ ಮಾರ್ಗದಿಂದ ರೋಗಿಯಾದರೆ ಅದಕ್ಕೆ ಔಷಧವಿದೆ ಎನ್ನುತ್ತದೆ. ಇಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ 18 ವರ್ಷಕ್ಕೆ ಹಾಗೂ ಗಂಡು ಮಕ್ಕಳಿಗೆ 21 ವರ್ಷಕ್ಕೆ ವಿವಾಹ ಮಾಡಿಸುವುದೇ ಪರಿಹಾರೋಪಾಯ’ ಎಂದರು.