ಪ್ರತಿ ಪೊಲೀಸ್ ಠಾಣೆಯ ಎಲ್ಲ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ರೆಕಾರ್ಡಿಂಗ್ ಜತೆಗೆ ಅಳವಡಿಕೆಯಾಗಿರಲೇಬೇಕು ಎಂದು ಮಧ್ಯಪ್ರದೇಶದ ಹೈಕೋರ್ಟ್ ಮಹತ್ವದ ಆದೇಶ ಮಾಡಿದೆ.
ಪೊಲೀಸರಿಂದ ಮಾರಕವಾಗಿ ಥಳಿತಕ್ಕೊಳಗಾದ ವ್ಯಕ್ತಿಯೊಬ್ಬರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಜಿ.ಎಸ್. ಅಹ್ಲುವಾಲಿಯಾ ಅವರಿದ್ದ ಪೀಠ, ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಉತ್ತಮ ಕ್ವಾಲಿಟಿ ಆಡಿಯೋ ರೆಕಾರ್ಡಿಂಗ್ ಸಮೇತ ಅಳವಡಿಕೆ ಮಾಡುವುದು ಹಾಗೂ 3 ತಿಂಗಳ ಕಾಲ ಆ ವಿಡಿಯೋಗಳನ್ನು ಸಂಗ್ರಹ ಮಾಡುವುದು ಕಡ್ಡಾಯ ಎಂದು ತಾಕೀತು ಮಾಡಿದೆ.
ಪ್ರಕರಣದಲ್ಲಿ ಪೊಲೀಸರು ವ್ಯಕ್ತಿಗೆ ಥಳಿಸಿರುವುದು ದೃಢಪಟ್ಟಿದೆ. ಸಿಸಿಟಿವಿ ಅಳವಡಿಸದಿರುವ ಕೋಣೆಗೆ ಕರೆದೊಯ್ದು ಥಳಿಸಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ. ಪೊಲೀಸರು ತಮ್ಮ ಕೃತ್ಯಕ್ಕೆ ಸಿಸಿಟಿವಿ ಇಲ್ಲದ ಕೋಣೆಗಳನ್ನು ಬಳಸುವುದು ತಪ್ಪು. ಇನ್ನು ಮುಂದೆ ಎಲ್ಲ ಕೋಣೆಗಳಿಗೆ ಸಿಸಿಟಿವಿ ಅಳವಡಿಕೆ ಕಡ್ಡಾಯ ಮಾಡಬೇಕು ಎಂದು ಮಧ್ಯಪ್ರದೇಶ ಪೊಲೀಸ್ ನಿರ್ದೇಶಕರಿಗೆ ನ್ಯಾಯಾಲಯ ಆದೇಶ ನೀಡಿದೆ.
ಮೂರು ತಿಂಗಳಲ್ಲಿ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಬೇಕು. ಈಗಾಗಲೇ ಸಿಸಿಟಿವಿ ಅಳವಡಿಕೆಯಾಗಿರುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಒಂದು ತಿಂಗಳಲ್ಲಿ ವರದಿ ತರಿಸಿಕೊಳ್ಳಬೇಕು. ಸಿಸಿಟಿವಿ ಇಲ್ಲದ ಪೊಲೀಸ್ ಠಾಣೆಗಳಲ್ಲಿ ಮೂರು ತಿಂಗಳಲ್ಲಿ ಅಳವಡಿಕೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
(ಮೂಲ:-LAW TIME)