ಸುದ್ದಿ

ಭೂಸ್ವಾಧೀನ ಪ್ರಕರಣದಲ್ಲಿ ಕರ್ನಾಟಕ ರಾಜ್ಯದ ಪರ ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ತೀರ್ಪು

Share It

ಮಾನ್ಯ ಸುಪ್ರೀಂಕೋರ್ಟ್, ಸೋಮವಾರ ದಿನಾಂಕ 09 ಫೆಬ್ರವರಿ 2026 ರಂದು, Deputy Commissioner & Special Land Acquisition Officer vs. SV Global Mills (SLP Civil No. 215 of 2023) ಹಾಗೂ ಸಂಬಂಧಿತ ಪ್ರಕರಣಗಳಲ್ಲಿ ಐತಿಹಾಸಿಕ ತೀರ್ಪು ನೀಡಿದ್ದು, ಕರ್ನಾಟಕ ರಾಜ್ಯ ಸರ್ಕಾರ ಸಲ್ಲಿಸಿದ್ದ 530 ಮೇಲ್ಮನವಿಗಳನ್ನು ಎತ್ತಿ ಹಿಡಿದಿದೆ. ಈ ಮೇಲ್ಮನವಿಗಳು ಕೃಷ್ಣಾ ಮೇಲ್ದಂಡೆ ಯೋಜನೆ, ಸಿಂಗಟಾಲೂರು ಏತ ನೀರಾವರಿ ಯೋಜನೆ, ರಾಜ್ಯ ಹೆದ್ದಾರಿ ಯೋಜನೆಗಳು ಹಾಗೂ ಇತರೆ ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದ ಧಾವೆಗಳಾಗಿವೆ.

ಈ ತೀರ್ಪು ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಮೇಲೆ ವ್ಯಾಪಕ ಪರಿಣಾಮ ಬೀರುವಂತದ್ದಾಗಿದ್ದು, ಕರ್ನಾಟಕ ಸರ್ಕಾರದ ಯಶಸ್ವಿ ಕಾನೂನು ಸವಾಲಿನ ಫಲವಾಗಿ ಪಣದಲ್ಲಿದ್ದ ಹತ್ತಾರು ಸಾವಿರಾರು ಕೋಟಿ ರೂಪಾಯಿಗಳ ಸಾರ್ವಜನಿಕ ಹಣವನ್ನು ಉಳಿಸಲು ಅತ್ಯಮೂಲ್ಯವಾದ ಅವಕಾಶ ನೀಡಿದೆ.

ಪ್ರಕರಣದ ಹಿನ್ನೆಲೆ:

​1.​ರಾಜ್ಯದ ವಿವಿಧ ಭಾಗಗಳಲ್ಲಿ ಮೂಲಸೌಕರ್ಯ ಯೋಜನೆಗಳಿಗಾಗಿ ಸ್ವಾಧೀನಪಡಿಸಲಾಗಿದೆ.

​2.​ಭೂಸ್ವಾಧೀನ ಅಧಿಕಾರಿಗಳು ನೀಡಿದ ಪರಿಹಾರಕ್ಕಿಂತ ಹೆಚ್ಚಿನ ಪರಿಹಾರಕ್ಕಾಗಿ ಭೂ ಮಾಲೀಕರು ನ್ಯಾಯಾಲಯಗಳಲ್ಲಿ (ರೆಫರೆನ್ಸ್ ಕೋರ್ಟ್) ದಾವೆ ಸಲ್ಲಿಸಿದ್ದರು.

​3.​ಹೆಚ್ಚಿನ ಪ್ರಕರಣಗಳಲ್ಲಿ ರೆಫರೆನ್ಸ್ ಕೋರ್ಟ್‌ಗಳು ಸರಿಯಾದ ಮಾರುಕಟ್ಟೆ ಮೌಲ್ಯ ಅಥವಾ ಮಾರ್ಗಸೂಚಿ ಮೌಲ್ಯಗಳನ್ನು ಪರಿಗಣಿಸದೆ ಅತಿಯಾದ ಮತ್ತು ಸಂಶಯಾಸ್ಪದ ಪರಿಹಾರ ವೃದ್ಧಿಯನ್ನು ಮಂಜೂರು ಮಾಡಿವೆ.

​4.​ಈ ಆದೇಶಗಳನ್ನು ಪ್ರಶ್ನಿಸಲು ರಾಜ್ಯ ಸರ್ಕಾರವು ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ಸ್ಥಾಪನೆಗಳಲ್ಲಿ ನ್ಯಾಯಸಮ್ಮತ ಪರಿಹಾರ ಮತ್ತು ಪಾರದರ್ಶಕತೆ ಕಾಯ್ದೆ 2013ರ ಸೆಕ್ಷನ್ 74 ಅಡಿಯಲ್ಲಿ ಹೈಕೋರ್ಟ್‌ಗಳಿಗೆ ಮೇಲ್ಮನವಿಗಳನ್ನು ಸಲ್ಲಿಸಿತ್ತು.

​5.​ಆದರೆ, ಹೆಚ್ಚಿನ ಮೇಲ್ಮನವಿಗಳನ್ನು 120 ದಿನಗಳ ಅವಧಿಯನ್ನು ಮೀರಿದ ಕಾರಣ ವಿಳಂಬ ಕ್ಷಮಿಸಿಕೊಳ್ಳಲಾಗುವುದಿಲ್ಲ ಎಂದು ಹೇಳಿ ಹೈಕೋರ್ಟ್‌ ಮನವಿಯನ್ನು ವಜಾಗೊಳಿಸಿತು. ಪರಿಣಾಮವಾಗಿ ಇಂತಹ ಪ್ರಕರಣಗಳ ತಾತ್ವಿಕ ಅಂಶಗಳನ್ನು ಪರಿಶೀಲಿಸದೆ, ರೆಫರೆನ್ಸ್ ಕೋರ್ಟ್‌ಗಳು ನೀಡಿದ್ದ ಅತಿಯಾದ ಪರಿಹಾರಗಳು ಅಂತಿಮವಾಗುವ ಆಪತ್ತು ಬಂದೊದಗಿತ್ತು.

ಆದರೆ, ಸರ್ಕಾರ ಈ ಪ್ರಕರಣಗಳನ್ನು ಪರಿಶೀಲಿಸಿದಾಗ ಕೋರ್ಟ್‌ಗಳಲ್ಲಿ ಸರಿಯಾದ ವಾದಗಳನ್ನು ಮಂಡಿಸದಿರುವುದು ಹಾಗೂ ಹೈಕೋರ್ಟ್‌ಗಳಲ್ಲಿ ಸಮಯಕ್ಕೆ ಸರಿಯಾಗಿ ಮೇಲ್ಮನವಿಗಳನ್ನು ಸಲ್ಲಿಸದಿರುವುದು ಹಾಗೂ ಹೀಗೆ ಮೇಲ್ಮನವಿ ಸಲ್ಲಿಸದಿರಲು ಅಧಿಕಾರಿಗಳು ಮತ್ತು ವಕೀಲರ ನಡುವೆ ಗಂಭೀರ ಹಾಗೂ ವ್ಯವಸ್ಥಿತ ಒಳ ಒಪ್ಪಂದಗಳು (collusion) ನಡೆದಿರುವ ಸಾಧ್ಯತೆ ಕಂಡುಬಂದಿದೆ. ಇದರ ಪರಿಣಾಮವಾಗಿ, ಅತಿರೇಕದ ದುಪ್ಪಟ್ಟು ಪರಿಹಾರ ಆದೇಶಗಳನ್ನು ಹೊರಡಿಸಲಾಗಿದೆ.

ಇದರಿಂದಾಗಿ ಸಾರ್ವಜನಿಕ ಖಜಾನೆಗೆ ಹತ್ತಾರು ಸಾವಿರಾರು ಕೋಟಿ ರೂಪಾಯಿಗಳ ಭಾರೀ ನಷ್ಟವಾಗುವ ಸಾಧ್ಯತೆ ಇದ್ದು, ಈ ರೀತಿಯ ಪದ್ಧತಿ ರಾಜ್ಯದಾದ್ಯಂತ ಮುಂದುವರಿದಿದ್ದು, ಭವಿಷ್ಯದಲ್ಲಿಯೂ ಸಾವಿರಾರು ಕೋಟಿ ರೂಪಾಯಿಗಳ ನಷ್ಟಕ್ಕೆ ಕಾರಣವಾಗುವ ಸಾಧ್ಯತೆಯೇ ಹೆಚ್ಚಾಗಿತ್ತು. ಅಲ್ಲದೆ, ಇದೊಂದು ಸಾರ್ವಜನಿಕ ಹಣವನ್ನು ವ್ಯವಸ್ಥಿತವಾಗಿ ದುರುಪಯೋಗ ಮಾಡಿಕೊಳ್ಳುವ ಮಾರ್ಗವಾಗಿದೆ.

​6.​ರಾಜ್ಯದ ಖಜಾನೆಯ ಮೇಲೆ ಉಂಟಾಗುವ ಗಂಭೀರ ಆರ್ಥಿಕ ಪರಿಣಾಮವನ್ನು ಗಮನಿಸಿ ಕರ್ನಾಟಕ ಸರ್ಕಾರವು ಈ ಪ್ರಕರಣಗಳನ್ನು ಮಾನ್ಯ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತು.

ಮಾನ್ಯ ಸುಪ್ರೀಂಕೋರ್ಟ್‌ನ ಪ್ರಮುಖ ನಿರ್ಣಯಗಳು

09.02.2026 ರಂದು ನೀಡಿದ ತೀರ್ಪಿನಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರ ಸಲ್ಲಿಸಿದ ಮೇಲ್ಮನವಿಗಳನ್ನು ಪುರಸ್ಕರಿಸಿ ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಮುಖ ಅಂಶಗಳನ್ನು ನಿರ್ಧರಿಸಿದೆ:

​•​ಭೂಸ್ವಾಧೀನ ಪ್ರಕರಣಗಳಲ್ಲಿ ವಿಳಂಬ ಅರ್ಜಿಗಳನ್ನು ಪರಿಗಣಿಸುವಾಗ, ಹೈಕೋರ್ಟ್‌ಗಳು ಉದಾರ ಮತ್ತು ಪ್ರಾಯೋಗಿಕ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.

​•​2013ರ ಕಾಯ್ದೆಯ ಸೆಕ್ಷನ್ 74 ಅಡಿಯಲ್ಲಿ ನಿಗದಿಪಡಿಸಿದ 120 ದಿನಗಳ ಅವಧಿಯನ್ನು ಮೀರಿದರೂ, ಮಿತಿ ಕಾಯ್ದೆ (Limitation Act) ಯ ಸೆಕ್ಷನ್ 5 ಅನ್ನು ಅನ್ವಯಿಸಿ ವಿಳಂಬವನ್ನು ಕ್ಷಮಿಸಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ವಿಳಂಬ, ಒಳ ಒಪ್ಪಂದ ಮತ್ತು ಹೊಣೆಗಾರಿಕೆ ಕುರಿತು ನ್ಯಾಯಾಲಯದ ಅವಲೋಕನ

ರಾಜ್ಯಕ್ಕೆ ಪರಿಹಾರ ನೀಡುವ ವೇಳೆ ಮಾನ್ಯ ಸುಪ್ರೀಂ ಕೋರ್ಟ್ ದೇಶದಾದ್ಯಂತ ಮೇಲ್ಮನವಿಗಳ ಸಲ್ಲಿಕೆಯಲ್ಲಿ ಸಂಭವಿಸಿರುವ ವಿಳಂಬಗಳ ಬಗ್ಗೆ ಗಂಭೀರ ಚಿಂತೆಯನ್ನು ವ್ಯಕ್ತಪಡಿಸಿದೆ. ನ್ಯಾಯಾಲಯದ ಪೀಠದ ಎದುರು ಬಂದಿದ್ದ ಸುಮಾರು 530 ಮೇಲ್ಮನವಿಗಳು, ಅಧಿಕಾರಿಗಳ ನಿರ್ಲಕ್ಷ್ಯ ಕಾರ್ಯವೈಖರಿ ಮತ್ತು ಒಳ ಒಪ್ಪಂದಗಳು ಸ್ಪಷ್ಟ ಉದಾಹರಣೆಗಳಾಗಿವೆ ಎಂಬುದನ್ನು ಕೋರ್ಟ್ ಗಮನಿಸಿದೆ. ಅನೇಕ ಪ್ರಕರಣಗಳಲ್ಲಿ ರೆಫರೆನ್ಸ್ ಕೋರ್ಟ್ ತೀರ್ಪಿನ ನಂತರ ನಿಗದಿತ ಅವಧಿಯಲ್ಲಿ ಪ್ರಮಾಣಿತ ಪ್ರತಿಗಳ ಅರ್ಜಿಯನ್ನೂ ಸಲ್ಲಿಸಲಾಗಿರಲಿಲ್ಲ ಎಂದು ಕೋರ್ಟ್ ಸೂಚಿಸಿದೆ.

ಇದೇ ರೀತಿಯ ಪ್ರಕರಣಗಳು ದೇಶದ ವಿವಿಧ ಭಾಗಗಳಿಂದ ನಿರಂತರವಾಗಿ ಎದುರಾಗುತ್ತಿರುವುದರಿಂದ, 2013ರ ಕಾಯ್ದೆಯ ಸೆಕ್ಷನ್ 74 ಅಡಿಯಲ್ಲಿ ಮೇಲ್ಮನವಿಗಳ ವಿಳಂಬವು ದೇಶ ವ್ಯಾಪಿ ಸಮಸ್ಯೆಯಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಸುಪ್ರೀಂ ಕೋರ್ಟ್‌ಗೂ ಮೇಲ್ಮನವಿಗಳನ್ನು ಸಲ್ಲಿಸುವಲ್ಲಿಯೂ ವಿಳಂಬವಾಗಿರುವುದನ್ನು ಗಮನಿಸಿ, ಭೂಸ್ವಾಧೀನ ಸಂಸ್ಥೆಗಳು ಮತ್ತು ಅವರ ವಕೀಲರ ನಡುವಿನ ಸಮನ್ವಯದ ಕೊರತೆ, ನಿರ್ಲಕ್ಷ್ಯ ಹಾಗೂ ಕೆಲವು ಪ್ರಕರಣಗಳಲ್ಲಿ ಸಂಧಿಯ ಸಾಧ್ಯತೆಗಳನ್ನೂ ಕೋರ್ಟ್ ಉಲ್ಲೇಖಿಸಿದೆ.

ಕಾನೂನು ಆಳ್ವಿಕೆಗೆ ಒಳಪಟ್ಟ ಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ ಹೊಣೆಗಾರಿಕೆ ಎಂಬುದು ಮೂಲಭೂತ ತತ್ವ ಎಂದು ಒತ್ತಿಹೇಳಿದ ನ್ಯಾಯಾಲಯ, ಈ ರೀತಿಯ ವರ್ತನೆ ನ್ಯಾಯ ವ್ಯವಸ್ಥೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕುಂದಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಕಾನೂನು ಪರಿಹಾರಗಳನ್ನು ಸಮಯಕ್ಕೆ ಸರಿಯಾಗಿ ಅನುಸರಿಸದಿರುವುದು ಕೇವಲ ನಿರ್ಲಕ್ಷ್ಯ ಎಂದು ಪರಿಗಣಿಸಲಾಗದು; ತಪ್ಪಿತಸ್ಥ ಅಧಿಕಾರಿಗಳ ಮೇಲೆ ಹೊಣೆಗಾರಿಕೆ ನಿಗದಿಪಡಿಸಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಸಂಧಿ ಸಾಬೀತಾಗದಿದ್ದರೂ ಸಹ ಭಾರೀ ಸಾರ್ವಜನಿಕ ಹಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಗಂಭೀರ ನಿರ್ಲಕ್ಷ್ಯ ಮತ್ತು ಉದಾಸೀನತೆ ಸ್ಪಷ್ಟವಾಗಿ ಕಾಣಿಸುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಆದ್ದರಿಂದ, ಭವಿಷ್ಯದಲ್ಲಿ ಮೇಲ್ಮನವಿಗಳು ಮತ್ತು ವಿಶೇಷ ಅನುಮತಿ ಅರ್ಜಿಗಳು (SLP) ಸಮಯಕ್ಕೆ ಸರಿಯಾಗಿ ಸಲ್ಲಿಸಲ್ಪಡಬೇಕು, ಭೂಸ್ವಾಧೀನ ಸಂಸ್ಥೆಗಳು ಹಾಗೂ ರಾಜ್ಯ ಅಧಿಕಾರಿಗಳು ಪರಿಣಾಮಕಾರಿ ನಿರ್ವಹಿಸಬೇಕು, ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆ ವ್ಯವಸ್ಥೆಗಳನ್ನು ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ಕರ್ನಾಟಕ ಸರ್ಕಾರ ಕೈಗೊಂಡ ಕ್ರಮಗಳು

ಈ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 2025ರಲ್ಲಿ, ಭೂಸ್ವಾಧೀನ ಮೇಲ್ಮನವಿಗಳ ಸಲ್ಲಿಕೆಯಲ್ಲಿ ಉಂಟಾಗುತ್ತಿರುವ ವಿಳಂಬಗಳ ಕಾರಣಗಳನ್ನು ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಹೊಣೆಗಾರಿಕೆ ನಿಗದಿಪಡಿಸಲು ಕರ್ನಾಟಕ ಸರ್ಕಾರವು ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು ರಚಿಸಿದೆ. ಸಮಿತಿಯ ವರದಿ ಶೀಘ್ರದಲ್ಲೇ ಮಂಡನೆಯಾಗುವ ನಿರೀಕ್ಷೆ ಇದೆ. 2019ರಿಂದ ಇಂತಹ ವಿಳಂಬಗಳ ಅನೇಕ ಉದಾಹರಣೆಗಳು ಗಮನಕ್ಕೆ ಬಂದಿವೆ.

ಇದಲ್ಲದೆ, ಭೂಸ್ವಾಧೀನ ಮತ್ತು ನ್ಯಾಯಾಲಯದ ದಾಖಲೆಗಳ ಸಲ್ಲಿಕೆಯಲ್ಲಿ ವಿಳಂಬವಾಗದಂತೆ ತಡೆಯಲು ರಾಜ್ಯ ಸರ್ಕಾರವು ಬಲಿಷ್ಠ ಮತ್ತು ಪಾರದರ್ಶಕ ಸಂಸ್ಥಾತ್ಮಕ ವ್ಯವಸ್ಥೆ ಹಾಗೂ ವಿಶೇಷ ಸಾಫ್ಟ್‌ವೇರ್ ರನ್ನು ಜಾರಿಗೆ ತರುವ ಕೆಲಸ ಪ್ರಗತಿಯಲ್ಲಿದೆ. ಇದರಿಂದ ಆಡಳಿತಾತ್ಮಕ ಲೋಪಗಳಿಂದಾಗಿ ರಾಜ್ಯದ ಸಂಪನ್ಮೂಲಗಳು ಆರ್ಥಿಕ ಅಪಾಯಕ್ಕೆ ಒಳಗಾಗದಂತೆ ನೋಡಿಕೊಳ್ಳಲಾಗುತ್ತದೆ.


Share It

You cannot copy content of this page