ಸುದ್ದಿ

ಜನಗಣತಿ ಕರ್ತವ್ಯಕ್ಕೆ ತೆರಳುತ್ತಿದ್ದ ಶಿಕ್ಷಕಿಗೆ ಟ್ರ್ಯಾಕ್ಟರ್ ಡಿಕ್ಕಿ: ಸ್ಥಳದಲ್ಲೇ ಸಾವು

Share It

​ಸಿದ್ದಾಪುರ: ಜನಗಣತಿ ಕಾರ್ಯದ ಮಾಹಿತಿ ನೀಡಲು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಶಿಕ್ಷಕಿಯೊಬ್ಬರಿಗೆ ವೇಗವಾಗಿ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ, ಶಿಕ್ಷಕಿ ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಶಿರಸಿ-ಸಿದ್ದಾಪುರ ಮುಖ್ಯ ರಸ್ತೆಯ ಕನ್ನಳ್ಳಿ (ಮಳವತ್ತಿ) ಚೆಕ್ ಪೋಸ್ಟ್ ಬಳಿ ಸಂಭವಿಸಿದೆ.

ಪಟ್ಟಣದ ಹೊಸೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಪೂರ್ಣಿಮಾ ಭಟ್ (46) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಇವರು ಇಂದು ಬೆಳಿಗ್ಗೆ ಜನಗಣತಿ ಕಾರ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಲು ತಮ್ಮ ಸ್ಕೂಟರ್‌ನಲ್ಲಿ ಹೊರಟಿದ್ದರು. ಈ ವೇಳೆ ಶಿರಸಿ ಕಡೆಯಿಂದ ಸಿದ್ದಾಪುರ ಕಡೆಗೆ ಅತಿ ವೇಗವಾಗಿ ಕಟ್ಟಿಗೆ ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್, ಕನ್ನಳ್ಳಿ ಚೆಕ್ ಪೋಸ್ಟ್ ಸಮೀಪ ಸ್ಕೂಟರ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಶಿಕ್ಷಕಿ ಪೂರ್ಣಿಮಾ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದು, ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಶಿಸ್ತುಬದ್ಧ ಶಿಕ್ಷಕಿಯಾಗಿ ಗುರುತಿಸಿಕೊಂಡಿದ್ದ ಪೂರ್ಣಿಮಾ ಅವರ ಸಾವು ಶಾಲಾ ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ಶೋಕ ಮೂಡಿಸಿದೆ.

ಹಾವೇರಿ ಮೂಲದ ಟ್ರ್ಯಾಕ್ಟರ್ ಚಾಲಕ ಆಕಾಶ್ ಮಂಜಪ್ಪ ಬಾಲಣ್ಣನವರ್ ಎಂಬಾತ ಟ್ರ್ಯಾಕ್ಟರ್ ಅನ್ನು ಅತಿ ವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಸದ್ಯ ಚಾಲಕನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


Share It

You cannot copy content of this page