ಸುದ್ದಿ

ದೆಹಲಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ: ಚಲಿಸುವ ಬಸ್‌ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಆರೋಪಿಗಳು ಅರೆಸ್ಟ್

Share It

ನವದೆಹಲಿ: ದೇಶದ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆ ಎಂಬುದು ಮತ್ತೆ ಪ್ರಶ್ನೆಯಾಗಿದೆ. ದೆಹಲಿಯ ನಂಗ್ಲೋಯಿ ಪ್ರದೇಶದಲ್ಲಿ ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ 30 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಹೀನ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಖಾಸಗಿ ಬಸ್ ಚಾಲಕ ಮತ್ತು ಕಂಡಕ್ಟರ್‌ನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

​ಸೋಮವಾರ ತಡರಾತ್ರಿ ಈ ಅಮಾನವೀಯ ಘಟನೆ ನಡೆದಿದೆ ಎನ್ನಲಾಗಿದೆ. ಪಿತಾಂಪುರದ ಕೊಳೆಗೇರಿ ನಿವಾಸಿಯಾದ ಸಂತ್ರಸ್ತೆ, ಮಂಗೋಲ್‌ಪುರಿಯ ಕಾರ್ಖಾನೆಯೊಂದರಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದರು.

ಸರಸ್ವತಿ ವಿಹಾರ್‌ನ ಬಿ-ಬ್ಲಾಕ್ ಬಸ್ ನಿಲ್ದಾಣಕ್ಕೆ ಬಂದ ಮಹಿಳೆ, ಅಲ್ಲಿ ನಿಂತಿದ್ದ ಸ್ಲೀಪರ್ ಬಸ್‌ನ ಬಾಗಿಲಲ್ಲಿದ್ದ ವ್ಯಕ್ತಿಯ ಬಳಿ ಸಮಯ ಕೇಳಿದ್ದಾರೆ. ಸಮಯ ಹೇಳುವ ನೆಪದಲ್ಲಿ ಆತ ಮಹಿಳೆಯನ್ನು ಬಸ್ಸಿನೊಳಗೆ ಬಲವಂತವಾಗಿ ಎಳೆದುಕೊಂಡಿದ್ದಾನೆ. ತಕ್ಷಣವೇ ಬಾಗಿಲು ಮುಚ್ಚಿದ ಆರೋಪಿಗಳು, ಬಸ್ ಚಲಾಯಿಸಲು ಆರಂಭಿಸಿದ್ದಾರೆ.

​ಬಸ್ ಒಳಗಡೆ ಪರದೆಗಳಿದ್ದ ಕಾರಣ ಹೊರಗಿನವರಿಗೆ ಏನೂ ಕಾಣಿಸುತ್ತಿರಲಿಲ್ಲ. ಸುಮಾರು ಎರಡು ಗಂಟೆಗಳ ಕಾಲ ಸುಮಾರು 7 ಕಿಲೋಮೀಟರ್‌ಗಳವರೆಗೆ ಬಸ್ ಓಡಿಸುತ್ತಲೇ, ಚಾಲಕ ಮತ್ತು ಕಂಡಕ್ಟರ್ ಮಹಿಳೆಯ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿದ್ದಾರೆ.
​”ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಗಾಯಗೊಂಡ ಸ್ಥಿತಿಯಲ್ಲಿದ್ದ ನನ್ನನ್ನು ಆರೋಪಿಗಳು ಬಸ್ಸಿನಿಂದ ಹೊರಗೆಸೆದು ಪರಾರಿಯಾದರು” ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

​ಘಟನೆಯ ನಂತರ ಧೈರ್ಯಗುಂದದ ಸಂತ್ರಸ್ತೆ ತಕ್ಷಣವೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
​ ರಾಣಿ ಬಾಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು ಉಮೇಶ್ ಮತ್ತು ರಾಜೇಂದ್ರ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


Share It

You cannot copy content of this page