ಸುದ್ದಿ

ಎಸ್‌ಡಿಆರ್‌ಎಫ್‌ ಸಿಪಿಐ ಶ್ರೀಶೈಲ ಚೌಗಲೆ ಆತ್ಮಹತ್ಯೆ; ಕಾರಣ ನಿಗೂಡ

Share It

ಬೆಳಗಾವಿ: DYSP ಆಗಿ ಬಡ್ತಿಪಡೆದಿದ್ದ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌) ಸಿಪಿಐ ಶ್ರೀಶೈಲ ಚೌಗಲೆ (37) ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ಚನ್ನಮ್ಮ ನಗರದಲ್ಲಿ ಗುರುವಾರ ನಡೆದಿದೆ.

ಚೌಗಲೆ ಅವರು ಮನೆಯ ಕೊಠಡಿಯ ಬಾಗಿಲು ಹಾಕಿಕೊಂಡಿದ್ದ ವೇಳೆ ಅನುಮಾನಗೊಂಡ ಪತ್ನಿ ತಕ್ಷಣವೇ ಎಸ್‌ಡಿಆರ್‌ಎಫ್‌ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಕೊಠಡಿಯ ಬಾಗಿಲು ಮುರಿದು ಅವರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

2024 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದ ಭೀಕರ ಶಿರೂರು ಗುಡ್ಡ ಕುಸಿತ ಉಂಟಾದಾಗ ಗುಡ್ಡ ಕುಸಿತ ಪ್ರದೇಶಕ್ಕೆ ತಕ್ಷಣ ಧಾವಿಸಿ SDRF ತಂಡವನ್ನು ಮುನ್ನಡಿಸಿದ್ದರು. ಹಾಗೆಯೇ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು 2025-26 ನೇ ಸಾಲಿನ ಮುಖ್ಯಮಂತ್ರಿ ಬಂಗಾರದ ಪದಕವನ್ನು ಕೂಡ ಪಡೆದಿದ್ದರು.

ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.ಘಟನೆ ಕುರಿತು ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತರ ಆತ್ಮಹತ್ಯೆಗೆ ಕಾರಣವೇನು ಎಂಬುದು ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ.


Share It

You cannot copy content of this page