ಸುದ್ದಿ

ಹಣ ದುರುಪಯೋಗ ಪ್ರಕರಣ; ಡಾ.ಮಹೇಶ್ ಜೋಶಿ ಕಸಾಪ ಆಜೀವ ಸದಸ್ಯತ್ವ ವಜಾ

Share It

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಣ ದುರುಪಯೋಗ ಮತ್ತು ಕರ್ತವ್ಯ ಲೋಪ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಡಾ.ಮಹೇಶ್ ಜೋಶಿ ಅವರನ್ನು ಕಸಾಪ ಆಜೀವ ಸದಸ್ಯತ್ವ ವಜಾಗೊಳಿಸಲಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಕಸಾಪ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತು ವಿಚಾರಣೆ ನಡೆಸಲು ತನಿಖಾಧಿಕಾರಿ ನೇಮಕ ಮಾಡಿ 2025ರ ಜೂನ್ 26 ಹಾಗೂ 30 ರಂದು ಸಹಕಾರ ಸಂಘಗಳ ನೋಂದಣಾಧಿಕಾರಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮಹೇಶ್ ಜೋಶಿ ಸಲ್ಲಿಸಿರುವ ಅರ್ಜಿಯು, ನ್ಯಾಯಮೂರ್ತಿ ಸೂರಜ್ ಗೋಂವಿದ ರಾಜ್ ಅವರ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ರಾಜ್ಯ ಪರ ವಕೀಲರು, ಮಹೇಶ್ ಜೋಶಿ ಅವರ ವಿರುದ್ದ ಆಪಾದನೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ವಿಚಾರಣೆ ನಡೆಸಿತ್ತು. ಈ ವಿಚಾರಣೆಯಲ್ಲಿ ಜೋಶಿ ಅವರ ಮೇಲಿನ ಆರೋಪಗಳು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕಸಾಪದ ಅವರ ಆಜೀವ ಸದಸ್ಯತ್ವ ವಜಾಗೊಳಿಸಿ ಆಡಳಿತಾಧಿಕಾರಿ ಆದೇಶ ಮಾಡಿದ್ದಾರೆ ಎಂದು ತಿಳಿಸಿದರು.

ಮಹೇಶ್ ಜೋಶಿ ಪರ ವಕೀಲರ ವಾದ ಆಲಿಸಲು ನ್ಯಾಯಪೀಠವು ಮುಂದಿನ ಅರ್ಜಿ ವಿಚಾರಣೆಯನ್ನು ಜೂ. 19ಕ್ಕೆ ಮುಂದೂಡಿದೆ.


Share It

You cannot copy content of this page