ಸುದ್ದಿ

ನಟ, ನಿರ್ಮಾಪಕ ದಿಲೀಪ್‌ ರಾಜ್‌ ಹೃದಯಾಘಾತದಿಂದ ನಿಧನ

Share It

ಬೆಂಗಳೂರು: ಸ್ಯಾಂಡಲ್‌ವುಡ್ ಹಾಗೂ ಕಿರುತೆರೆಯ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ (48) ಅವರು ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇಂದು ಮುಂಜಾನೆ ದಿಲೀಪ್ ರಾಜ್ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಕುಮಾರಸ್ವಾಮಿ ಲೇಔಟ್‌ನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಈ ಅಕಾಲಿಕ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಚಿತ್ರರಂಗದ ಗಣ್ಯರು, ಕಿರುತೆರೆ ಕಲಾವಿದರು ಹಾಗೂ ಸ್ನೇಹಿತರು ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ.

1978ರ ಸೆಪ್ಟೆಂಬರ್ 2ರಂದು ಬೆಂಗಳೂರಿನಲ್ಲಿ ಜನಿಸಿದ ದಿಲೀಪ್ ರಾಜ್, ಕಾಲೇಜು ದಿನಗಳಿಂದಲೇ ನೃತ್ಯ ಮತ್ತು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ‘ಕಂಬದ ಮನೆ’ ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ ಇವರು, ‘ಜನನಿ’, ‘ರಂಗೋಲಿ’, ‘ಕುಂಕುಮ ಭಾಗ್ಯ’, ‘ಮಾಂಗಲ್ಯ’ ಸೇರಿದಂತೆ ಅನೇಕ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾಗಿದ್ದರು.

ಬೆಳ್ಳಿತೆರೆಯಲ್ಲಿ ಮಿಂಚು:

2005ರಲ್ಲಿ ‘ಬಾಯ್‌ಫ್ರೆಂಡ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ದಿಲೀಪ್, 2007ರಲ್ಲಿ ತೆರೆಕಂಡ ಪುನೀತ್ ರಾಜ್‌ಕುಮಾರ್ ಅಭಿನಯದ ‘ಮಿಲನ’ ಚಿತ್ರದ ಖಳನಾಯಕನ ಪಾತ್ರದ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದರು. ‘7 ಓ ಕ್ಲಾಕ್’, ‘ಕ್ಷಣ ಕ್ಷಣ’ ಸೇರಿದಂತೆ ಹಲವು ಚಿತ್ರಗಳಲ್ಲಿ ತಮ್ಮ ವಿಭಿನ್ನ ನಟನೆಯ ಮೂಲಕ ಗುರುತಿಸಿಕೊಂಡಿದ್ದರು.

ಕೇವಲ ನಟನೆಯಷ್ಟೇ ಅಲ್ಲದೆ, ನಿರ್ಮಾಣ ಸಂಸ್ಥೆಯನ್ನು ಆರಂಭಿಸಿ ಕಿರುತೆರೆಯಲ್ಲಿ ಯಶಸ್ವಿ ನಿರ್ಮಾಪಕರಾಗಿ ಹೊರಹೊಮ್ಮಿದ್ದರು. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಕೃಷ್ಣ ರುಕ್ಕು’ ಸೇರಿದಂತೆ ಹಲವಾರು ಪ್ರಾಜೆಕ್ಟ್‌ಗಳನ್ನು ಇವರು ನಿರ್ವಹಿಸುತ್ತಿದ್ದರು.

​ಪ್ರತಿಭಾನ್ವಿತ ನಟ ಹಾಗೂ ನಿರ್ಮಾಪಕನನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಲೋಕಕ್ಕೆ ದೊಡ್ಡ ನಷ್ಟವಾಗಿದೆ.


Share It

You cannot copy content of this page