ಸುದ್ದಿ

ಪತ್ನಿಯ ಮಧ್ಯಂತರ ಜೀವನಾಂಶ ಅರ್ಜಿ ವಜಾ ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ

Share It

​ಬೆಂಗಳೂರು: ಮಧ್ಯಂತರ ಜೀವನಾಂಶ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಪತಿಯಿಂದ ಮಾಸಿಕ 50 ಸಾವಿರ ರೂ. ಜೀವನಾಂಶ ಹಾಗೂ ಮೊಕದ್ದಮೆ ವೆಚ್ಚವಾಗಿ 1 ಲಕ್ಷ ರೂ. ಕೊಡಿಸುವಂತೆ ಕೋರಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಮನ್ನಥ ರಾವ್ ಅವರ ಏಕಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ.

​ವಿಚಾರಣೆ ವೇಳೆ ಅಭಿಪ್ರಾಯಪಟ್ಟ ನ್ಯಾಯಾಲಯ, “ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24ರ ಅಡಿ ಜೀವನಾಂಶ ನಿರ್ಧರಿಸಲು ಯಾವುದೇ ಕಠಿಣ ಸೂತ್ರಗಳಿಲ್ಲ. ಆದರೆ, ಸಂಗಾತಿಗೆ ಆರ್ಥಿಕ ಬೆಂಬಲ ನೀಡುವುದು ಮತ್ತು ಅವರು ಕಾನೂನು ಹೋರಾಟವನ್ನು ಸಮರ್ಥವಾಗಿ ನಡೆಸಲು ಅನುವು ಮಾಡಿಕೊಡುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ,” ಎಂದು ತಿಳಿಸಿದೆ. ಕೌಟುಂಬಿಕ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಲು ಸೂಕ್ತ ಕಾರಣಗಳನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಹೈಕೋರ್ಟ್ ಹೇಳಿದೆ.

​ಪ್ರಕರಣದ ಹಿನ್ನೆಲೆ:
​ಈ ಹಿಂದೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯವು, “ದಂಪತಿ ಕೇವಲ 6 ರಿಂದ 7 ತಿಂಗಳು ಮಾತ್ರ ಒಟ್ಟಿಗೆ ವಾಸಿಸಿದ್ದರು” ಎಂಬ ಕಾರಣ ನೀಡಿ 2025ರ ಸೆಪ್ಟೆಂಬರ್ 17ರಂದು ಪತ್ನಿಯ ಜೀವನಾಂಶ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.

​ತಾನು ಪ್ರಸ್ತುತ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದು, ಯಾವುದೇ ಉದ್ಯೋಗ ಹೊಂದಿಲ್ಲ. ಆದರೆ ಪತಿ ದುಬೈನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದು, ಮಾಸಿಕ ಸುಮಾರು 8 ಲಕ್ಷ ರೂ. ಆದಾಯ ಹೊಂದಿದ್ದಾರೆ. ಹೀಗಾಗಿ ತನಗೆ ಜೀವನ ನಿರ್ವಹಣೆಗೆ ಆರ್ಥಿಕ ನೆರವು ಅಗತ್ಯವಿದೆ ಎಂದು ಪತ್ನಿ ವಾದಿಸಿದ್ದರು.

​ಪ್ರಕರಣವನ್ನು ಮರುಪರಿಶೀಲಿಸುವಂತೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಹೈಕೋರ್ಟ್ ವಾಪಸ್ ಕಳುಹಿಸಿದೆ. ಅಲ್ಲದೆ, ಜೂನ್ 10ರಂದು ದಂಪತಿಗಳು ಖುದ್ದಾಗಿ ಅಥವಾ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ.


Share It

You cannot copy content of this page